ಸೋಮವಾರಪೇಟೆ, ಜೂ. 20: ನಾಳೆಗಾಗಿ ನಾವು ಗಿಡ ನೆಡಬೇಕಾದ ಅನಿವಾರ್ಯತೆ ಇರುವದರಿಂದ ಪ್ರತಿಯೊಬ್ಬರೂ ಮನೆಗೊಂದು ಗಿಡವನ್ನು ನೆಡುವ ಮೂಲಕ ಪರಿಸರ ಕಾಳಜಿಯನ್ನು ಹೊಂದಬೇಕೆಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲೂಕು ಪತ್ರಕರ್ತರ ಸಂಘ, ಪುಷ್ಪಗಿರಿ ಜೆ.ಸಿ. ಸಂಸ್ಥೆ ಮತ್ತು ಮಹಿಳಾ ಸಮಾಜ ಹಾಗೂ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಜನರಿಗೆ ಪರಿಸರ ಕಾಳಜಿ ರಕ್ತಗತವಾಗಿ ಬಂದಿದೆ. ಜಿಲ್ಲೆಯ ಜನರಿಗೆ ಪರಿಸರ ಪಾಠದ ಅವಶ್ಯಕತೆ ಇಲ್ಲ. ಆದರೆ ನಮ್ಮನ್ನಾಳುವ ಯಾವದೇ ಸರಕಾರಗಳು ಜಿಲ್ಲೆಯ ಬಗ್ಗೆ, ಇಲ್ಲಿನ ಪರಿಸರದ ಬಗ್ಗೆ, ಕಾವೇರಿ ಉಗಮಸ್ಥಾನ, ನದಿಯ ಪಾವಿತ್ರ್ಯತೆಯ ಬಗ್ಗೆ ಅಸಡ್ಡೆ ಹೊಂದಿವೆ. ಪರಿಸರ ನಾಶದೊಂದಿಗೆ ಅನಧಿಕೃತ ರೆಸಾರ್ಟ್ಗಳು ತಲೆ ಎತ್ತಿ ನಿಂತಿರುವದರಿಂದ ಇಲ್ಲಿನ ಸಂಸ್ಕøತಿ ಕೂಡ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ ಮಾತನಾಡಿ, ಮರ-ಗಿಡಗಳು ಇಲ್ಲದಿದ್ದರೆ ಬದುಕು ಅಸಾಧ್ಯ, ಪರಿಸರ, ನದಿ, ಜಲ ಮೂಲಗಳನ್ನು ರಕ್ಷಿಸಬೇಕಾಗಿರುವದು ನಮ್ಮ ಕರ್ತವ್ಯವಾಗಬೇಕು ಎಂದರು. ಇಲಾಖೆಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ ಮಾತನಾಡಿ, ಪರಿಸರ ಕಾಳಜಿ ಒಂದು ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಅದು ನಿತ್ಯದ ಕಾಯಕವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಯೋಗೇಶ್ ಮಾತನಾಡಿ, ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ನಮ್ಮ ಮನೆ ಮತ್ತು ಕಚೇರಿಯಿಂದ ಆರಂಭವಾಗಬೇಕು. ಶುಚಿತ್ವ ಮತ್ತು ಸಂರಕ್ಷಣೆ ನಿತ್ಯದ ಕಾಯಕವಾಗಬೇಕು. ಸಾವಿರ ಜನರು ಸೇರಿ ಒಂದು ಗಿಡ ನೆಡುವ ಬದಲು ಸಾವಿರಾರು ಗಿಡಗಳಿಗೆ ಆಶ್ರಯ ನೀಡುತ್ತಿರುವ ಸಾಲು ಮರದ ತಿಮ್ಮಕ್ಕನಲ್ಲಿರುವ ಪರಿಸರ ಕಾಳಜಿಯನ್ನು ನಾವು ಬೆಳೆಸಿಕೊಳ್ಳ ಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪುಷ್ಪಗಿರಿ ಜೆ.ಸಿ. ಸಂಸ್ಥೆ ಅಧ್ಯಕ್ಷ ಪ್ರಕಾಶ್, ಜೆ.ಸಿ. ರೆಟ್ಸ್ ಅಧ್ಯಕ್ಷೆ ಮಾಯಾ ಗಿರೀಶ್, ಮಹಿಳಾ ಸಮಾಜದ ಅಧ್ಯಕ್ಷೆ ಗಾಯಿತ್ರಿ ನಾಗರಾಜ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಗಣೇಶ್, ಜೆ.ಸಿ. ನಿಕಟಪೂರ್ವ ವಲಯ ಉಪಾಧ್ಯಕ್ಷೆ ಎ.ಆರ್. ಮಮತ, ಬಿಟಿಸಿಜಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹೆಚ್.ಎಸ್. ಶರಣ್, ಯೋಜನಾಧಿಕಾರಿ ಪ್ರಕಾಶ್, ಮೇಲ್ವಿಚಾರಕ ರಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಪರಿಸರ ರಕ್ಷಣೆ ಮತ್ತು ಮಹತ್ವ ಕುರಿತು ಬಿಟಿಸಿಜಿ ಕಾಲೇಜು ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನ ನಡೆಯಿತು.