ಆಲೂರು-ಸಿದ್ದಾಪುರ, ಜೂ. 20: ಮೇ 31 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೊಸತೋಟ ಗ್ರಾಮದ ಆಟೋ ಚಾಲಕ ಗಣೇಶ್ ಕುಟುಂಬ ಇದೀಗ ತೀರ ಬಡತನದಲ್ಲಿದೆ. ಈ ಕುಟುಂಬಕ್ಕೆ ಅಸರೆಯಾಗಿದ್ದ ಗಣೇಶ್ ಮೃತಪಟ್ಟಿದ್ದರಿಂದ ಇದೀಗ ದಿಕ್ಕೆ ತೋಚದ ಸ್ಥಿತಿಯಲ್ಲಿ ಗಣೇಶ್ರ ಪತ್ನಿ ಹಾಗೂ ಮಂಚದಿಂದ ಕೆಳಕ್ಕೆ ಇಳಿಯದ ಎರಡು ಅಂಗವಿಕಲ ಹೆಣ್ಣು ಮಕ್ಕಳು ಹಾಗೂ ಮೂರನೇ ತರಗತಿಗೆ ತೆರಳುತ್ತಿರುವ ಓರ್ವ ಪುತ್ರಿ ದಿನತಳ್ಳುತಿದ್ದು ಇದನ್ನರಿತ ಅನೇಕ ದಾನಿಗಳು ಹಣ ಸಹಾಯವನ್ನು ಮಾಡುತ್ತಿದ್ದಾರೆ.
ಶನಿವಾರಸಂತೆಯಲ್ಲೂ ಸಹ ಸ್ಥಳೀಯ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಗಣೇಶನ ಆ ಅಂಗವಿಕಲ ಹೆಣ್ಣು ಮಕ್ಕಳ ನೆರವಿನ ದೃಷ್ಟಿಯಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದರು, ಆದರೆ ದೇಣಿಗೆ ಸಂಗ್ರಹಿಸುತ್ತಿರುವಾಗ ಪಟ್ಟಣದಲ್ಲಿ ಇವರನ್ನೆ ಗಮನಿಸುತ್ತಿದ್ದ ಭಿಕ್ಷೆ ಬೇಡುತ್ತ ಯಾರಿಗೂ ತೊಂದರೆ ನೀಡದೆ ದಿನತಳ್ಳುತ್ತಿರುವ ಸುಮಾರು 85 ವರ್ಷದ ವೃದ್ಧೆ ಇವರನ್ನು ಆ ದೇಣಿಗೆ ಪೆಟ್ಟಿಗೆಯಲ್ಲಿ ಅಳವಡಿಸಲಾಗಿದ್ದ ಆ ಅಂಗವಿಕಲ ಮಕ್ಕಳ ಚಿತ್ರವನ್ನು ನೋಡಿ ಇದೇನು ಎಂದು ಕೇಳಿದಾಗ ಸಂಪೂರ್ಣ ವಿವರಣೆಯನ್ನು ಸಂಘಟಕರು ವಿವರಿಸಿದಾಗ ಆ ಅಜ್ಜಿಯ ಹೃದಯ ಆ ಮಕ್ಕಳಿಗಾಗಿ ಮಿಡಿಯಿತು. ತಾನೇ ಇತರರಲ್ಲಿ ಬೇಡಿ ಜೀವನ ನಡೆಸುತ್ತಿದ್ದೇನೆ. ಆದರೂ ನನ್ನ ಒಂದು ಈ ಚಿಕ್ಕ ಸಹಾಯ ಇರಲಿ ಎಂದು ಪೆಟ್ಟಿಗೆಗೆ ಇತರರ ಬಳಿಯಿಂದ ತಾನು ಬೇಡಿದ ಹಣವನ್ನು ಹಾಕಿದರು. ಸಂಘಟಕರು ನೀವು ಕೊಡುವದು ಬೇಡ ಎಂದು ಅಜ್ಜಿಗೆ ಹೇಳಿದರೂ ಸಹ ನಿಮಗಲ್ಲ ಇದು ಆ ಮುದ್ದಾದ ಅಂಗವಿಕಲ ಮಕ್ಕಳಿಗೆ ನೀಡಿ ಎಂದು ಹೇಳಿ ಮುಂದೆ ಸಾಗೀತು ಆ ವೃದ್ಧೆ.
ಮಾನವಿಯತೆ ಎಂಬದು ಹಾಗೂ ಬಡತನ ಯಾವ ಹೃದಯವನ್ನು ಸಹ ಮಿಡಿಯುವಂತೆ ಮಾಡುತ್ತದೆ ಎಂಬದಕ್ಕೆ ಈ ಅಜ್ಜಿಯೇ ಸಾಕ್ಷಿಯಾಗಿದ್ದಾರೆ. ದೇಣಿಗೆ ಸಂಗ್ರಹ ಸಂದರ್ಭ ಭಜರಂಗದಳದ ಕೊಡಗು ಜಿಲ್ಲಾ ಸಹ ಸಂಚಾಲಕ ಚಾಮೇರ ಪ್ರದೀಪ್, ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಕರುಣೇಶ್, ಮಹೇಶ್, ಸುರೇಶ್ ಶೆಟ್ಟಿ, ಯಶ್, ಪ್ರದೀಪ್, ಬಾಲ್ರಾಜ್, ರಕ್ಷಿತ್, ಸಂತೋಷ್, ಅಶೋಕ್ ಇನ್ನಿತರರಿದ್ದರು.