ವೀರಾಜಪೇಟೆ, ಜೂ. 20: ಕಳೆದ ನಾಲ್ಕು ತಿಂಗಳ ಹಿಂದೆ ಇಲ್ಲಿನ ಹಳೆ ತಾಲೂಕು ಕಚೇರಿಯ ಸ್ಥಳದಲ್ಲಿಯೇ ನಿರ್ಮಾಣಗೊಂಡು ಪ್ರಾರಂಭ ಗೊಂಡಿರುವ ಮಿನಿ ವಿಧಾನಸೌಧ ದಲ್ಲಿರವ ತಾಲೂಕು ಕಚೇರಿಯ ಕಟ್ಟಡ ಮಳೆಯಿಂದ ಸೋರುತ್ತಿದ್ದು ಕಟ್ಟಡದ ಒಳಾಂಗಣ ಆವರಣ ನೀರಿನಿಂದ ಆವೃತ್ತಗೊಂಡಿದ್ದು ರೈತರು, ಸಾರ್ವಜನಿಕರು ಕಚೇರಿಯ ಒಳಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಈ ದುಸ್ಥಿಯ ವಿರುದ್ಧ ಕೊಡಗು ಜಿಲ್ಲಾ ರೈತ ಸಂಘ ಹಾಗೂ ತಾಲೂಕು ಹಿತ ರಕ್ಷಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಸಮಿತಿಯ ಸಂಚಾಲಕ ಚಿಮ್ಮಂಗಡ ಗಣೇಶ್ ಮಿನಿ ವಿಧಾನಸೌಧದ ಕಳಪೆ ಕಾಮಗಾರಿಯಿಂದ ತಾಲೂಕು ಕಚೇರಿಯು ಮಳೆಯಿಂದ ಸೋರುತ್ತಿದೆ. ತಾಲೂಕು ಕಚೇರಿಯ ಸಿಬ್ಬಂದಿಗಳ ಪ್ರತಿ ಕೊಠಡಿಗೆ ನೀರು ನುಗ್ಗುತ್ತಿದೆ. ಮೇಲ್ಚಾವಣಿಯಿಂದ ನೀರು ಹೊರಗೆ ಹೋಗದೆ ಕಟ್ಟಡದ ಒಳಗೆ ಹರಿಯುತ್ತಿದೆ. ಕಟ್ಟಡದ ಆವರಣದ ಸುತ್ತ ಸುಮಾರು ಎರಡೂವರೆ ಅಡಿಗಳಷ್ಟು ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಂಘಟನೆಗಳಿಂದ ಮೇಲಧಿಕಾರಿಗಳಿಗೆ ದೂರು ಕೊಡುವದಕ್ಕಿಂತಲೂ ನೇರವಾಗಿ ರಾಜ್ಯದ ಉಚ್ಚನ್ಯಾಯಾಲ ಯದಲ್ಲಿ ಮಿನಿ ವಿಧಾನಸೌಧದ ಗುತ್ತಿಗೆದಾರರು ಹಾಗೂ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದ ಲೋಕೋಪ ಯೋಗಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ಹೂಡಲಾ ಗುವದು. ಮಾಹಿತಿ ಹಕ್ಕಿನ ಮೂಲಕ ದಾಖಲೆಗಳನ್ನು ಪಡೆದು ನ್ಯಾಯಾಲ ಯಕ್ಕೆ ಸಲ್ಲಿಸಲಾಗುವದು ಎಂದು ಹೇಳಿದರು.

ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ. ಕುಶಾಲಪ್ಪ ಮಾತನಾಡಿ ಸುಮಾರು ರೂ ಎರಡು ಕೋಟಿ ಅರವತ್ತೈದು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಅಧೋಗತಿಯಲ್ಲಿದೆ. ಈ ಪರಿಸ್ಥಿತಿಯಲ್ಲಿ

(ಮೊದಲ ಪುಟದಿಂದ) ಯಾರೂ ತಾಲೂಕು ಕಚೇರಿಗೆ ಹೋಗಲು ಸಾಧ್ಯವಾಗುವ ದಿಲ್ಲ. ಇದೇ ತಾಲೂಕು ಕಚೇರಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಬಾಕಿ ಉಳಿದಿರುವ ಕಡತಗಳು ವಿಲೇವಾರಿಗೆ ಬಾಕಿ ಇದೆ. ಸರಕಾರ ಬದಲಾದರೂ ತಾಲೂಕು ಕಚೇರಿಯಲ್ಲಿ ಸಮಸ್ಯೆಗಳ ಸರಮಾಲೆ ಮುಂದುವರೆದಿದೆ. ಕಟ್ಟಡದ ಕಳಪೆ ಕಾಮಗಾರಿಗೆ ಕಾರಣವಾಗಿರುವ ಇಲಾಖೆಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವದರೊಂದಿಗೆ ಉಚ್ಚ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವದು ಎಂದರು. ಪ್ರತಿಭಟನೆಯಲ್ಲಿ ಟಿ.ಶೆಟ್ಟಿಗೇರಿ ಶ್ರೀಮಂಗಲ ವಿಭಾಗದ ಸಂಚಾಲಕ ಮಚ್ಚಾಮಾಡ ರಂಜಿ, ಎನ್.ಸುಬ್ಬಯ್ಯ, ಸಿ.ಅಪ್ಪಚ್ಚು, ಪಿ.ಪೂವಯ್ಯ, ಎಂ.ರಾಜು ರೈತ ಸಂಘದ ಪ್ರಮುಖರು ಹಾಜರಿದ್ದರು.