ಸೋಮವಾರಪೇಟೆ, ಜೂ.20: ಕಳೆದ ಅನೇಕ ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುಸ್ತಕ ವಿತರಿಸುತ್ತಿರುವ, 18 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸೋಮವಾರಪೇಟೆಯ ಆನೆಕೆರೆ ಮತ್ತು ಯಡೂರು ಕೆರೆಯನ್ನು ಹೂಳು ತೆಗೆಸುವ ಮೂಲಕ ಆಧುನಿಕ ಭಗೀರಥ ಎಂದೇ ಕರೆಯಲ್ಪಡುವ ಹರಪಳ್ಳಿ ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಆಸ್ಪತ್ರೆಯ ಆವರಣದಲ್ಲಿ ತುಂಬಿದ್ದ ತ್ಯಾಜ್ಯಗಳು, ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಶ್ರಮದಾನ ಮಾಡಿದರು. ಇದರೊಂದಿಗೆ ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಸೋಮೇಶ್ವರ ದೇವಾಲಯದಲ್ಲಿ ಮಂಡಿಕಾಲಿನಲ್ಲಿ ಪ್ರದಕ್ಷಿಣೆ ಮಾಡಿದರು. ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ತೋಳೂರುಶೆಟ್ಟಳ್ಳಿ ಘಟಕದ ಅಧ್ಯಕ್ಷ ಶಿವಪ್ಪ, ಪದಾಧಿಕಾರಿಗಳಾದ ದರ್ಶನ್, ಮಣಿಕಂಠ, ಪಿ.ಎ.ಆನಂದ್, ಎಲ್. ರವಿ, ಪ್ರಸಾದ್, ಎನ್.ಆರ್. ರವಿ, ಹೆಚ್.ಓ. ಪ್ರಕಾಶ್, ಎನ್. ನಾಗರಾಜು, ಡಿ.ಪಿ. ರಾಜು, ಪುನಿತ್,ಪೊನ್ನಪ್ಪ, ಶಿವಕುಮಾರ್, ಹಸನಬ್ಬ, ಸೂರ್ಯ ಸೇರಿದಂತೆ ಇತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.