ಸೋಮವಾರಪೇಟೆ, ಜೂ. 20: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಹೈಟೆಕ್ ಮಾರುಕಟ್ಟೆ ಮಳೆಗಾಲದಲ್ಲಿ ಸೋರಿಕೆಯಾಗುತ್ತಿರುವ ಹಿನ್ನೆಲೆ, ಮುಂದಿನ 1 ವಾರದಲ್ಲಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪ.ಪಂ. ಅಭಿಯಂತರರಿಗೆ ಸೂಚಿಸಿದರು.
ಮಾರುಕಟ್ಟೆಯ ಮೇಲ್ಛಾವಣಿ ಯಿಂದ ನೀರು ಹರಿಯಲು ಅಳವಡಿಸಲಾಗಿರುವ ಶೀಟ್ಗಳು ತುಕ್ಕು ಹಿಡಿದು ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆ ವರ್ತಕರು ಹಾಗೂ ಗ್ರಾಹಕರಿಗೆ ಸಮಸ್ಯೆ ಎದುರಾಗಿದ್ದು, ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಫೈಬರ್ ಕಂಪೆನಿಯವರೊಂದಿಗೆ ಮಾತುಕತೆ ನಡೆಸಿ, ಛಾವಣಿಯಿಂದ ನೀರು ಸರಾಗವಾಗಿ ಹರಿಯಲು ಫೈಬರ್ ದೋಣಿಗಳನ್ನು ಅಳವಡಿಸ ಬೇಕು. ತಕ್ಷಣ ಈ ಬಗ್ಗೆ ಟೆಂಡರ್ ಕರೆದು ಕ್ರಮ ವಹಿಸಬೇಕು. ಇದರೊಂದಿಗೆ ಮಾರುಕಟ್ಟೆಯ ಒಳಭಾಗದಲ್ಲಿ ನೀರು ಹರಿಯಲು ಸಣ್ಣ ಚರಂಡಿ ನಿರ್ಮಿಸುವಂತೆ ಅಭಿಯಂತ ರರಿಗೆ ನಿರ್ದೇಶನ ನೀಡಿದರು.
ಮಾರುಕಟ್ಟೆಯ ಒಳಭಾಗದಲ್ಲಿ ಸಂಜೆ ವೇಳೆಗೆ ಕತ್ತಲಾವರಿಸುವದರಿಂದ ವ್ಯಾಪಾರ ವಹಿವಾಟು ನಡೆಸಲು ಕಷ್ಟವಾಗಿದೆ ಎಂದು ವರ್ತಕರು ಅಳಲು ತೋಡಿಕೊಂಡ ಸಂದರ್ಭ, ಹೈಮಾಸ್ಟ್ ಲೈಟ್ಗಳನ್ನು ಅಳವಡಿಸಿದ್ದುದನ್ನು ಯಾರೋ ಕದ್ದೊಯ್ದಿದ್ದಾರೆ. ನೂತನ ಬಲ್ಬ್ಗಳನ್ನೂ ಸಹ ಉಳಿಸುತ್ತಿಲ್ಲ ಎಂದು ಅಭಿಯಂತರ ವೀರೇಂದ್ರ ತಿಳಿಸಿದರು. ಮಾರುಕಟ್ಟೆಯ ಒಳಭಾಗ ಬೆಳಕಿನ ವ್ಯವಸ್ಥೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ಶಾಸಕ ರಂಜನ್ ಹೇಳಿದರು. ಇದೇ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದ್ದು, ಅದರ ಮೇಲ್ಭಾಗ ಮೆಸ್ಗಳನ್ನು ಅಳವಡಿಸಬೇಕು. ನೀರು ಸೋರಿಕೆಯಾಗುತ್ತಿರುವ ಪ.ಪಂ. ವಾಣಿಜ್ಯ ಮಳಿಗೆಗಳ ಸಮಸ್ಯೆ ಪರಿಹರಿಸಬೇಕು. ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳನ್ನು ಕೆಳ ಮಹಡಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ರಂಜನ್ ಅವರು, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ವೀರೇಂದ್ರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದರು.
ಶುಚಿತ್ವಕ್ಕೆ ಆದ್ಯತೆ ನೀಡಲು ಮನವಿ: ಇದೇ ಸಂದರ್ಭ ಮಾಧ್ಯಮದವ ರೊಂದಿಗೆ ಮಾತನಾಡಿದ ಶಾಸಕರು, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸ ಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಪ.ಪಂ.ನ ವಾಹನಕ್ಕೆ ನೀಡಬೇಕು. ಮನೆಯಲ್ಲಿಯೇ ಕಸವನ್ನು ಬೇರ್ಪಡಿಸುವ ಮೂಲಕ ವೈಜ್ಞಾನಿಕ ವಿಲೇವಾರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಪ.ಪಂ. ಸದಸ್ಯರುಗಳಾದ ಲೀಲಾ ನಿರ್ವಾಣಿ, ಸುಷ್ಮಾ, ಸುಶೀಲ, ಬಿ.ಎಂ. ಸುರೇಶ್, ಈಶ್ವರ್, ವೆಂಕಟೇಶ್, ಶೀಲಾ ಡಿಸೋಜ, ಮೀನಾಕುಮಾರಿ, ಇಂದ್ರೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಬಿಜೆಪಿ ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.