ಕುಶಾಲನಗರ, ಜೂ 21: ಕುಶಾಲನಗರ ಪಟ್ಟಣದ ಸಮರ್ಪಕ ಸಂಚಾರ ವ್ಯವಸ್ಥೆಗೆ ನಾಗರೀಕರು ಕೈಜೋಡಿಸಬೇಕೆಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಮನವಿ ಮಾಡಿದ್ದಾರೆ.

ಅವರು ಸ್ಥಳೀಯ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರು ಮಾಲೀಕರ ಸಂಘ ಮತ್ತು ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಅತಿ ಶೀಘ್ರ ಬೆಳವಣಿಗೆ ಕಾಣುತ್ತಿರುವ ಪಟ್ಟಣದಲ್ಲಿ ಸುವ್ಯವಸ್ಥಿತ ಸಂಚಾರಿ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪಟ್ಟಣದ ಹೃದಯ ಭಾಗದಲ್ಲಿ ಇಲಾಖೆಯಿಂದ ಅಂದಾಜು ರೂ. 8 ಲಕ್ಷ ವೆಚ್ಚದಲ್ಲಿ ಸಂಚಾರಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದ್ದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಉಂಟಾಗಲಿರುವ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ವಾಹನ ಚಾಲಕರು ಹಾಗೂ ನಾಗರಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗುತ್ತಿದ್ದು ಈ ಸಂಬಂಧ ತಂತ್ರಜ್ಞರೊಂದಿಗೆ ಚರ್ಚಿಸಲಾಗುವದು ಎಂದು ಸಂಚಾರಿ ಠಾಣಾಧಿಕಾರಿ ನವೀನ್‍ಗೌಡ ಮಾಹಿತಿ ನೀಡಿದರು. ತಾತ್ಕಾಲಿಕವಾಗಿ ಬೆಳಗ್ಗೆ 8.30 ರಿಂದ ರಾತ್ರಿ 8 ರತನಕ ಸಿಗ್ನಲ್ ಲೈಟ್ ಕಾರ್ಯ ನಿರ್ವಹಿಸುವದಾಗಿ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಪ್ರಮುಖರು ಪಟ್ಟಣದ ಸಂಚಾರಿ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

ಗಣಪತಿ ದೇವಾಲಯದ ಬಳಿ ಯಾವದೇ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು. ಖಾಸಗಿ ಬಸ್‍ಗಳು, ಮ್ಯಾಕ್ಸಿ ಕ್ಯಾಬ್‍ಗಳ ತಾತ್ಕಾಲಿಕ ನಿಲ್ದಾಣಗಳನ್ನು ಬದಲಾಯಿಸಬೇಕು, ಆಟೋ ಚಾಲಕರು ಸಂಚಾರಿ ವ್ಯವಸ್ಥೆಗೆ ಸಹಕರಿಸಬೇಕು ಎಂಬ ಚರ್ಚೆಗಳು ನಡೆದವು. ಭಾರೀ ವಾಹನಗಳನ್ನು ಪಟ್ಟಣದ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸಲು ಕ್ರಮಕೈಗೊಳ್ಳುವದು ಸೇರಿದಂತೆ ಹಲವು ಸಲಹೆಗಳು ಕೇಳಿಬಂದವು. ಸಂಚಾರಿ ಪೊಲೀಸ್ ಸಿಬ್ಬಂದಿಗಳು ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು ಎನ್ನುವ ಸಲಹೆಗಳು ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್‍ರಾಜ್, ಉಪಾಧ್ಯಕ್ಷ ಎಂ.ಕೆ.ದಿನೇಶ್, ಆಟೋ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೋಜಣ್ಣ ರೆಡ್ಡಿ ಮತ್ತಿತರರು ಇದ್ದರು.