18 ಸಾವಿರ ಅಡಿ ಎತ್ತರದಲ್ಲಿ ಯೋಗ
ಶ್ರೀನಗರ, ಜೂ. 21: ಅಂತರರಾಷ್ಟ್ರೀಯ ಯೋಗ ದಿನವನ್ನು 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಪ್ರದರ್ಶಿಸಿ ಭಾರತೀಯ ಯೋಧರು ಸಾಹಸ ಮೆರೆದಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಸೇನಾ ವಿಭಾಗದ ಯೋಧರು ಈ ಸಾಹಸವನ್ನು ಮಾಡಿದ್ದಾರೆ. ಲಡಾಕ್ನ ಕಣಿವೆ ಪ್ರದೇಶಗಳಲ್ಲಿನ 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಯೋಧರು ಸೂರ್ಯ ನಮಸ್ಕಾರ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದಾರೆ. ಲಡಾಕ್‍ನ ಅನೇಕ ಗಡಿ ಪ್ರದೇಶಗಳು ಯಾವಾಗಲೂ ಹಿಮದಿಂದ ಆವೃತವಾಗಿರುತ್ತದೆ. ಇಲ್ಲಿ ನಮಗೆ ಉಸಿರಾಡಲು ಅಸಾಧ್ಯವಾಗುವಷ್ಟು ಹಿಮ ಆವರಿಸಿಕೊಂಡಿರುತ್ತದೆ. ಇಂತಹ ಸ್ಥಳದಲ್ಲಿ ಯೋಧರು ಯೋಗ ಪ್ರದರ್ಶನ ಮಾಡಿ ತಮ್ಮ ಸಾಹಸವನ್ನು ಮೆರೆದಿದ್ದಾರೆ. ಇಂತಹ ಪ್ರದೇಶಗಳು ಉಗ್ರರು ಭಾರತದ ಗಡಿಯೊಳಗೆ ನುಸುಳುವದಕ್ಕೆ ಅನುಕೂಲವಾಗಿದ್ದು, ಇಂತಹ ಸ್ಥಳಗಳಲ್ಲಿ ಭಾರತೀಯ ಸೇನೆಯು ಉನ್ನತ ತರಬೇತಿ ಪಡೆದ ಯೋಧರನ್ನು ನೇಮಿಸಿ ಉಗ್ರರ ನುಸುಳುವಿಕೆಯನ್ನು ತಡೆದಿದ್ದಾರೆ. ಮೈ ಕೊರೆಯುವ ಚಳಿ ಹಾಗೂ ಉಸಿರಾಟಕ್ಕೂ ತೊಂದರೆಯಾಗುವ ಈ ಪ್ರದೇಶದಲ್ಲಿ ಯೋಧರು ದೇಶಕ್ಕೊಸ್ಕರ ಸೇವೆ ಸಲ್ಲಿಸುತ್ತಿರುವದು ಹೆಮ್ಮೆಯ ವಿಚಾರವಾಗಿದೆ.
ಇಂಜಿನಿಯರ್‍ಗಳಿಗೆ ಉಗ್ರ ತರಬೇತಿ
ಲಾಹೋರ್, ಜೂ. 21: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾ ಇಂಜಿನಿಯರ್‍ಗಳಿಗೆ ಮ್ಯಾನೇಜ್ಮೆಂಟ್ ತರಬೇತಿ ನೀಡುತ್ತಿದೆ. ಲಾಹೋರ್‍ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಇಂಜಿನಿಯರ್‍ಗಳಿಗೆ ಮ್ಯಾನೇಜ್ಮೆಂಟ್ ತರಬೇತಿ ಕೋರ್ಸ್‍ಗಳನ್ನು ನೀಡುತ್ತಿದೆ. ಕೋರ್ಸ್ ಮುಕ್ತಾಯಗೊಂಡ ನಂತರ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಪಡೆಯುವಂತೆ ಇಂಜಿನಿಯರ್‍ಗಳಿಗೆ ಸೂಚನೆ ನೀಡಲಾಗಿದೆ ಎಂದು ಭಾರತದ ಗುಪ್ತಚರ ಇಲಾಖೆ ಹೇಳಿದೆ. ಮುಂಬೈ ಧಾಳಿಯ ಮಾಸ್ಟರ್ ಮೈಂಡ್‍ಗಳಲ್ಲಿ ಒಬ್ಬನಾಗಿರುವ ಅಬ್ದುಲ್ ರೆಹ್ಮಾನ್ ಮಕ್ಕಿಗೆ ಕೋರ್ಸ್‍ನ ಜವಾಬ್ದಾರಿ ನೀಡಲಾಗಿದೆ. ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಗಿಟ್ಟಿಸುವ ಉದ್ದೇಶದಿಂದ ಹಾಗೂ ಬರುವ ವೇತನದಲ್ಲಿ ಒಂದಷ್ಟು ಭಾಗವನ್ನು ಭಾರತದ ಮೇಲೆ ಧಾಳಿ ನಡೆಸಲು ಸಹಕಾರಿಯಗುವಂತೆ ಉಗ್ರ ಸಂಘಟನೆಗೆ ನೀಡುವದು ಕೋರ್ಸ್‍ನ ಮೂಲ ಉದ್ದೇಶವಾಗಿದೆ. ಸುಮಾರು 300 ಜನ ಇಂಜಿನಿಯರ್‍ಗಳಿಗೆ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಪಡೆಯುವಂತೆ ಸೂಚಿಸಲಾಗಿದೆ.
ಭೀಕರ ಅಪಘಾತದಲ್ಲಿ 15 ಸಾವು
ಮೊರೆನಾ, ಜೂ. 21: ಮಧ್ಯ ಪ್ರದೇಶದ ಮೊರೆನಾದಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇಂದು ಬೆಳಗಿನ ಜಾವ ಜೀಪ್‍ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 12 ಮಂದಿ ದುರ್ಮರಣವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಪ್ರಾಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್‍ವೊಂದಕ್ಕೆ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಘಟನೆ ಸಂಭವಿಸುತ್ತಿದ್ದಂತೆಯೇ ಪೆÇಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಗಾಯಗೊಂಡ ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದರು. ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ಶಾಂತಿಗಾಗಿ ಯಾಸಿನ್ ಮಲಿಕ್ ಬಂಧನ
ಶ್ರೀನಗರ, ಜೂ. 21: ಪ್ರತ್ಯೇಕವಾದಿಗಳ ಪ್ರತಿಭಟನೆ ತಡೆಯುವದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಲಿಬೆರೇಷನ್ ಫ್ರಂಟ್ ಅಧ್ಯಕ್ಷ ಯಾಸಿನ್ ಮಲಿಕ್ ಅವರನ್ನು ಬಂಧಿಸಲಾಗಿದೆ ಮತ್ತು ಹುರಿಯತ್ ಕಾನ್ಫೆರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಖ್‍ರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮಲಿಕ್ ಅವರನ್ನು ಅವರ ಮೈಸುಮ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದ್ದು, ಕೋತಿಬಾಗ್ ಪೆÇಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೆÇಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಮಿರ್ವೈಜ್ ಅವರನ್ನು ಅವರ ನಿಗೀನ್ ನಿವಾಸದಲ್ಲಿ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತ್ಯೇಕವಾದಿಗಳು ಕಣಿವೆ ರಾಜ್ಯದಲ್ಲಿ ನಾಗರಿಕರ ಹತ್ಯೆ ಮತ್ತು ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರು.
ಕೃಷಿಗೆ ನೀರು ಬಿಡಲು ಸಿಎಂ ಸೂಚನೆ
ರಾಮನಗರ, ಜೂ. 21: ಕಾವೇರಿ ಜಲಾನಯನ ಪ್ರದೇಶ ರೈತರಿಗೆ ನೀರಿನ ಕೊರತೆಯಾಗುವದಿಲ್ಲ, ರೈತರ ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ. ರಾಮನಗರ ತಾಲೂಕಿನ ಪೇಟೆ ಕುರುಬರಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ನದಿಯಿಂದ ಮಂಡ್ಯ ಭಾಗದ ರೈತರ ಕಬ್ಬು ಹಾಗೂ ಭತ್ತದ ಬೆಳೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಕಾಲುವೆಗಳಿಗೆ ನೀರು ಬಿಡುವ ಸಂಬಂಧ ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶಕ್ಕಾಗಿ ಕಾಯಲಾಗದು. ಯಾವದೇ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ಬಂದರೂ ತಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.