ಮಡಿಕೇರಿ, ಜೂ. 21 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ‘ಕಾನೂನು ಸಾಕ್ಷರತಾ ಆಂದೋಲನ’ ಮೂಲಕ ವಿಶೇಷ “ಕಾನೂನು ಅರಿವು ಕಾರ್ಯಕ್ರಮ”ವು ತಾ 23 ರಿಂದ 26 ರ ವರೆಗೆ ನಡೆಯಲಿದೆ.

ತಾ. 23 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ನ್ಯಾಯಾಲಯ ಆವರಣದಲ್ಲಿ ಚಾಲನೆ ದೊರಕಲಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಕಾಡ್ಲೂರು ಸತ್ಯನಾರಾಯಣಾ ಚಾರ್ಯ, ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ವಿಜಯ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ವಕೀಲರ ಸಂಘದ ಅಧ್ಯP್ಷÀ ಕೆ.ಎಸ್.ಕವನ್ ಅವರು ಕಾನೂನು ನೆರವು ಉಚಿತ, ಜನತಾ ನ್ಯಾಯಾಲಯ ಮತ್ತು ಕಾನೂನು ಸೇವಾ ಪ್ರಾಧಿಕಾರ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮಕ್ಕಳಿಗೆ ಬಾಲಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣಾ ಯೋಜನೆ, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಕೀಲ ಎಂ.ಎ.ನಿರಂಜನ ಅವರು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಗರದ ಶಕ್ತಿ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಇರುವ ಕಾನೂನು ಮತ್ತು ಹಕ್ಕುಗಳು ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ವಕೀಲ ಕೆ.ಡಿ.ದಯಾನಂದ ಅವರು ಉಪನ್ಯಾಸ ನೀಡಲಿದ್ದಾರೆ.

ತಾ. 24 ರಂದು ಬೆಳಗ್ಗೆ 9.30 ಗಂಟೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ರ್ಯಾಗಿಂಗ್ ತಡೆ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕುರಿತು ವಕೀಲ ಒ.ಎಸ್. ಚಿಂಗಪ್ಪ ಉಪನ್ಯಾಸ ನೀಡಲಿದ್ದಾರೆ. ನಂತರ ಬೆಳಗ್ಗೆ 11.30 ಗಂಟೆಗೆ ನಗರದ ಹೊರ ವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ವಿಶೇಷ ಸೇವೆಗಳು, ಪ್ಲಿ ಬಾರ್ಗೈನಿಂಗ್ ಮತ್ತು ಕೈದಿಗಳಿಗಿರುವ ಹಕ್ಕುಗಳು ಮತ್ತು ಪೊಲೀಸ್ ದೂರು ಪ್ರಾಧಿಕಾರ ಬಗ್ಗೆ ವಕೀಲರಾದ ಒ.ಎಸ್.ಚಿಂಗಪ್ಪ ಮಾಹಿತಿ ನೀಡಲಿದ್ದಾರೆ.

ತಾ. 25 ರಂದು ಬೆಳಿಗ್ಗೆ 9.30 ಗಂಟೆಗೆ ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಬಾಲನ್ಯಾಯ ಮಂಡಳಿ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ವಕೀಲೆ ಕೆ.ಎಂ. ಮೀನಾಕುಮಾರಿ ಉಪನ್ಯಾಸ ನೀಡಲಿದ್ದಾರೆ. ಬೆಳಿಗ್ಗೆ 11.30 ಗಂಟೆಗೆ ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಡತನ ನಿರ್ಮೂಲನೆ ಯೋಜನೆಗಳ ಬಗ್ಗೆ ವಕೀಲೆ ಕೆ.ಎಂ.ಮೀನಾಕುಮಾರಿ ಅವರು ಮಾಹಿತಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಗೆ ನೆಲ್ಯಹುದಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ಸಂತ್ರಸ್ತರ ಯೋಜನೆ ಹಾಗೂ ಪರಿಸರ ಸಂರಕ್ಷಣೆ ಕುರಿತು ವಕೀಲೆ ಕೆ.ಎಂ.ಮೀನಾಕುಮಾರಿ ಉಪನ್ಯಾಸ ನೀಡಲಿದ್ದಾರೆ.

ತಾ. 26 ರಂದು ಬೆಳಿಗ್ಗೆ 9.30 ಗಂಟೆಗೆ ಮದೆನಾಡು ಗ್ರಾಮದ ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಬಾಲ ಕಾರ್ಮಿಕ ತಡೆ ಕಾಯ್ದೆ ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ, 11.30 ಗಂಟೆಗೆ ಸಂಪಾಜೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಅಗತ್ಯತೆ ಮತ್ತು ಸ್ತ್ರೀ ಭ್ರೂಣ ಹತ್ಯೆ ನಿಯಂತ್ರಣ ಕುರಿತು, ಮಧ್ಯಾಹ್ನ 2.30 ಗಂಟೆಗೆ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ, ಜನನ ಮತ್ತು ಮರಣ ನೋಂದಣಿ ಕಾಯ್ದೆ ಬಗ್ಗೆ ವಕೀಲ ಪಿ.ಪುಂಡರೀಕ ಅವರು ಮಾಹಿತಿ ನೀಡಲಿದ್ದಾರೆ. ಈ ಎಲ್ಲಾ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.