ಗೋಣಿಕೊಪ್ಪಲು, ಜೂ. 21 : ದ.ಕೊಡಗಿನಲ್ಲಿ ಹುಲಿ ಧಾಳಿ ಮುಂದುವರೆದಿದ್ದು ರೈತರ ಜಾನುವಾರುಗಳನ್ನು ಪ್ರತಿ ದಿನ ಕೊಂದು ಹಾಕುತ್ತಿದೆ. ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ರೈತರಾದ ಕುಂಞಂಗಡ ಸಿದ್ದು, ಸಿದ್ದಾರ್ಥ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಗಬ್ಬ ಹಸುವಿನ ಮೇಲೆ ಧಾಳಿ ನಡೆಸಿ ಕೊಂದು ಹಾಕಿದೆ. ಮೂರು ದಿನದಲ್ಲಿ ಈ ಹಸುವು ಕರು ಹಾಕುವ ಸಂಭವವಿತ್ತು. (ಮೊದಲ ಪುಟದಿಂದ) ಈ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರೈತರ ಕೊಟ್ಟಿಗೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕೊಟ್ಟಿಗೆಯಲ್ಲಿ ನಡೆಯುವ ಘಟನೆಗಳು ಮನೆ ಮಾಲೀಕರಿಗೆ ಲಭ್ಯವಾಗುತ್ತಿಲ್ಲ. ಮುಂಜಾನೆ ವೇಳೆಯಲ್ಲಿ ಲಗ್ಗೆಯಿಡುವ ಹುಲಿಯು ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಮುಂಜಾನೆ ಕೊಟ್ಟಿಗೆಗೆ ಹಾಲು ಕರೆಯಲು ಮನೆ ಮಾಲೀಕ ಆಗಮಿಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮುಂಜಾನೆ ಸಮೀಪದ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪ ಅವರ ಎರಡು ಹಾಲು ಕರೆಯುವ ಹಸುವಿನ ಮೇಲೆ ಧಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಸೆರೆಗೆ ಬೋನ್‍ಅನ್ನು ಅಳವಡಿಸಿದ್ದ ಅರಣ್ಯ ಸಿಬ್ಬಂದಿಗಳು ರಾತ್ರಿಯಿಡಿ ಸಮೀಪದ ಕೊಟ್ಟಿಗೆ ಬಳಿ ಸ್ಥಳೀಯರ ಸಹಕಾರದಿಂದ ಹುಲಿ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಹುಲಿಯು ಬೋನು ಇರಿಸಿದ್ದ ಸ್ಥಳಕ್ಕೆ ಆಗಮಿಸದೆ ಸಮೀಪದ ನೆಮ್ಮಲೇ ಗ್ರಾಮದತ್ತ ತೆರಳಿ ಮುಂಜಾನೆ ವೇಳೆಗೆ ಸಿದ್ದು ಅವರ ಕೊಟ್ಟಿಗೆಯಲ್ಲಿದ್ದ ಹಸುವನ್ನು ಕೊಂದು ಹಾಕಿದೆ. ಈ ಭಾಗದ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಹುಲಿಯು ಮುಂಜಾನೆ ವೇಳೆಯಲ್ಲಿ ಕೊಟ್ಟಿಗೆಯಲ್ಲಿರುವ ಹಸುಗಳ ಮೇಲೆ ಧಾಳಿ ನಡೆಸುತ್ತಿವೆ.
ಸುದ್ದಿ ತಿಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೆಮ್ಮಲೆ ಗ್ರಾಮಕ್ಕೆ ತೆರಳಿ ಹಸು ಕಳೆದುಕೊಂಡ ಕುಂಞಂಗಡ ಸಿದ್ದು, ಸಿದ್ದಾರ್ಥ ಹಾಗೂ ಕುಟುಂಬದವರನ್ನು ಮಾತನಾಡಿಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪರಿ ಪರಿಯಾಗಿ ಬೇಡಿಕೊಂಡರೂ ಹುಲಿ ಸೆರೆ ಹಿಡಿಯುವ ಪ್ರಯತ್ನಕ್ಕೆ ಇಚ್ಚಾ ಶಕ್ತಿ ತೋರಿಸುತ್ತಿಲ್ಲ. ಸ್ಥಳೀಯ ಕಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಹಳೆಯ ಕಾಲದ ಬೋನ್‍ಅನ್ನು ನೆಪ ಮಾತ್ರಕ್ಕೆ ಇಟ್ಟು ತೆರಳುತ್ತಿದ್ದಾರೆ. ಕೂಡಲೇ ಹುಲಿ ಸೆರೆಗೆ ಪ್ರಯತ್ನ ನಡೆಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳಿಗೆ ಎಚ್ಚರಿಸಿದರು.
ಸ್ಥಳದಿಂದ ಮಡಿಕೇರಿಯ ಸಿಸಿಎಫ್ ಲಿಂಗರಾಜ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಸಂಕೇತ್ ಪೂವಯ್ಯ ಈ ಭಾಗದಲ್ಲಿ ಕಳೆದ 4 ದಿನಗಳಿಂದ ನಿರಂತರ ಹುಲಿ ಧಾಳಿ ನಡೆಸುತ್ತಿದ್ದರೂ ಹಿರಿಯ ಅಧಿಕಾರಿಗಳಾದ ತಾವು ಸ್ಥಳಕ್ಕೆ ಭೇಟಿ ನೀಡದೆ ಇರುವ ಬಗ್ಗೆ ಪ್ರಶ್ನಿಸಿದರು. ಹುಲಿ ಸೆರೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ಸಿಸಿಎಫ್ ಲಿಂಗರಾಜು ಮಾತನಾಡಿ, ತಾನು ಸ್ಥಳಕ್ಕೆ ಬಂದು ಮಾಡುವದು ಏನಿದೆ? ಎಂದು ಉಡಾಫೆಯ ಮಾತಾನಾಡಿದರು. ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇವರ ಮಾತಿನಿಂದ ಆಕ್ರೋಶಗೊಂಡ ಸಂಕೇತ್ ಪೂವಯ್ಯ ಸ್ಥಳದಿಂದ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹುಲಿ ಹಾವಳಿಯಿಂದ ರೈತರಿಗಾದ ತೊಂದರೆಯ ಬಗ್ಗೆ ವಿವರಿಸಿ ಕೊಡಗಿನ ಅರಣ್ಯ ಅಧಿಕಾರಿಗಳು ಸ್ಪಂದಿಸದೇ ಇರುವದರ ಬಗ್ಗೆ ದೂರು ನೀಡಿ ಕೂಡಲೇ ಇವರ ಬಗ್ಗೆ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿದರು.
ಮುಂಜಾನೆ ಸುದ್ದಿ ತಿಳಿಯುತ್ತಿದ್ದಂತೆಯೇ ರೈತ ಸಂಘದ ಮುಖಂಡ ಅಜ್ಜಮಾಡ ಚಂಗಪ್ಪ ಮೈಸೂರಿನಲ್ಲಿ ಇದ್ದರು. ದೂರವಾಣಿ ಮೂಲಕ ವೀರಾಜಪೇಟೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಹುಲಿ ಸೆರೆಗೆ ಬೋನ್ ಅಳವಡಿಸುವಂತೆಯೂ, ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವಂತೆಯೂ ಹಾಗೂ ರಾತ್ರಿಯ ಕಾರ್ಯಾಚರಣೆಗೆ ಸ್ಥಳೀಯ ನಾಗರಿಕರ ಸಹಾಯ ಪಡೆಯುವಂತೆಯೂ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಮಳೆಯನ್ನು ಲೆಕ್ಕಿಸದೇ ಹುಲಿ ಸೆರೆ ಹಿಡಿಯುವ ಬೋನ್‍ಅನ್ನು ಇಡುವ ಮೂಲಕ ಹುಲಿ ಕಾರ್ಯಾಚರಣೆಗೆ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು. ರೈತ ಸಂಘದ ಮುಖಂಡ ಐಯ್ಯಮಾಡ ಹ್ಯಾರಿ ಸೋಮೆಶ್, ಜೆಡಿಎಸ್‍ನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಗ್ರಾಮಸ್ಥರು, ಸಿಸಿಎಫ್ ಲಿಂಗರಾಜು ಅವರ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 5 ದಿನಗಳಿಂದ ಈ ಭಾಗದ ಸುತ್ತ ಮುತ್ತಲಿನಲ್ಲಿ ಈಗಾಗಲೇ 4 ಜಾನುವಾರುಗಳನ್ನು ಹುಲಿ ಬಲಿ ತೆಗೆದುಕೊಂಡಿದೆ. ತಿತಿಮತಿ ರ್ಯಾಪಿಡ್ ಫೋರ್ಸ್ ತಂಡ, ಪೊನ್ನಂಪೇಟೆ ಅರಣ್ಯ ಸಿಬ್ಬಂದಿಗಳು ಸೇರಿದಂತೆ ಅರಣ್ಯ ಇಲಾಖೆಯ ಸಂಜು ಹಾಗೂ ಮತ್ತಿತರರು ಸ್ಥಳದಲ್ಲಿ ಹಾಜರಿದ್ದರು.
ಒಂಟಿ ಸಲಗ ಧಾಳಿ
*ಗೋಣಿಕೊಪ್ಪಲು : ತಿತಿಮತಿ ಜಂಗಲ್ ಹಾಡಿಗೆ ಒಂಟಿ ಸಲಗ ಧಾಳಿ ನಡೆಸಿ ಮನೆಗಳಿಗೆ ಹಾನಿ ಮಾಡಿದೆ.
ಗುರುವಾರ ಮುಂಜಾನೆ ಕಾಫಿ ತೋಟದಲ್ಲಿದ್ದ ಆನೆ ಹಾಡಿಯಲ್ಲಿ ನಾಯಿ ಬೊಗಳುತ್ತಿರುವ ಶಬ್ದ ಆಲಿಸಿ ಕಾಡಿಗೆ ನುಗ್ಗಿದೆ. ನಾಯಿಗಳನ್ನು ಬೆರೆಸುವ ಸಂದರ್ಭ ಮನೆಗಳಿಗೆ ಹಾನಿಯುಂಟಾಗಿದ್ದು, ದೇವಿ ಮತ್ತು ಬೋಜಿ ಎಂಬವರ ಮನೆಗಳ ಹಂಚುಗಳು ಹೊಡೆದು ಹೋಗಿದೆ. ಆನೆ ತಳ್ಳಿದ ರಭಸಕ್ಕೆ ಗೋಡೆಗಳು ಬಿರುಕು ಬಿಟ್ಟಿದೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯೆ ಪಂಕಜ ಭೆÉೀಟಿ ನೀಡಿ ಆನೆ ಧಾಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
- ಹೆಚ್.ಕೆ. ಜಗದೀಶ್, ದಿನೇಶ್ ಎನ್.ಎನ್.