ವೀರಾಜಪೇಟೆ, ಜೂ. 21: ಇಂದಿನ ಒತ್ತಡದ ಜಂಜಾಟದ ಬದುಕಿನಲ್ಲಿ ಸಮಸ್ಯೆಗಳೇ ಹೆಚ್ಚಾಗಿದೆ. ಪ್ರತಿದಿನ ಯೋಗಾಭ್ಯಾಸ ಮಾಡಿಕೊಳ್ಳುವದರಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ಇಂದು ನಡೆದ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿ ಅವರು ಋಷಿಮುನಿಗಳ ಕಾಲದಿಂದಲೂ ಯೋಗ ನಿರಂತರವಾಗಿ ನಡೆದು ಬರುತ್ತಿದ್ದು ಯೋಗದಿಂದ ಮಾನಸಿಕ ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಯೋಗಾಭ್ಯಾಸಕ್ಕೆ ಜಾತಿ, ಮತ, ಬೇಧ, ವಯೋಮಿತಿ ಇಲ್ಲ. ಯಾರು ಬೇಕಾದರೂ ಯೋಗದಲ್ಲಿ ಭಾಗವಹಿಸಬಹುದು. ವಿಶ್ವದ 170 ರಾಷ್ಟ್ರಗಳಲ್ಲಿ ಯೋಗಾಭ್ಯಾಸ ನಿರಂತರವಾಗಿ ನಡೆಯುತ್ತಿದೆ. 40 ಮುಸ್ಲಿಂ ರಾಷ್ಟ್ರಗಳು ಇದನ್ನು ಪ್ರತಿಪಾದಿಸುತ್ತಿರುವದು ಶ್ಲಾಘನೀಯ ಎಂದರು.
ಕಾವೇರಿ ಆಶ್ರಮದ ವಿವೇಕಾನಂದಾ ಶರಣಾ ಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಯೋಗಾಭ್ಯಾಸದಲ್ಲಿ ಪ್ರತಿಯೊಬ್ಬರು ಭಾಗವಹಿಸುವದ ರೊಂದಿಗೆ ಯೋಗಾಭ್ಯಾಸ ಶಾಶ್ವತವಾಗಿ ಉಳಿಯುವಂತಾಗಬೇಕೆಂದು ಹೇಳಿದರು. ಯೋಗಗುರು ಸೀತಾರಾಂ ರೈ, ಹಿರಿಯ ಯೋಗಪಟು ಬಿ. ಗಣಪತಿ ಉಪಸ್ಥಿತರಿದ್ದರು.(ಮೊದಲ ಪುಟದಿಂದ) ಗೋಣಿಕೊಪ್ಪಲುವಿನಲ್ಲಿ ಸಾಮೂಹಿಕ ಯೋಗ
ಗೋಣಿಕೊಪ್ಪ ವರದಿ: ವಿಶ್ವ ಯೋಗ ದಿನಾಚರಣೆಯನ್ನು ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಆಚರಿಸಲಾಯಿತು. ಗೋಣಿಕೊಪ್ಪದ ಉಮಾಮಹೇಶ್ವರಿ ಪೆಟ್ರೋಲಿಯಂ, ಆರ್ಟ್ ಆಫ್ ಲಿವಿಂಗ್ ಸಂಯುಕ್ತ ಆಶ್ರಯದಲ್ಲಿ ಪೆಟ್ರೋಲ್ ಬಂಕ್ ಎದುರು ಸಾರ್ವಜನಿಕರು ಸಾಮೂಹಿಕವಾಗಿ ಆಚರಿಸಿದರು. 1 ಗಂಟೆಗಳ ಕಾಲ ಯೋಗ ಪ್ರದರ್ಶನ ನಡೆಯಿತು.
ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ಸಂಚಾಲಕ ರಾಜಪ್ಪ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ರೀಕೋನಾಸನ, ಸಮತಂಡಾಸನ, ಬದ್ರಾಸನ ಮುಂತಾದ 17 ಬಗೆಯ ಯೋಗ ಪ್ರದರ್ಶನ ನಡೆಸಿಕೊಟ್ಟರು.
ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಮಂದಿ ಯೋಗ ಪ್ರದರ್ಶನ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಮಾತನಾಡಿ, ಯೋಗದಿಂದ ಸ್ಪೂರ್ತಿ ದೊರೆಯುತ್ತದೆ. ಪ್ರತಿ ದಿನವು ಉಲ್ಲಾಸದಿಂದ ದಿನ ಕಳೆಯಬಹುದು. ಹೆಚ್ಚು ಹೆಚ್ಚಾಗಿ ಯುವಕರಲ್ಲಿ ಯೋಗ ಜಾಗೃತಿ ಮೂಡುವಂತಾಗಬೇಕು. ಮನಸ್ಸಿನ ಸಮಾನತೆ ಕಾಪಾಡಲು ಯೋಗ ಅನುಕೂಲವಾಗುತ್ತದೆ ಎಂದರು.
ಉಮಾಮಹೇಶ್ವರಿ ಪೆಟ್ರೋಲಿಯಂನ ಮಾಲೀಕ ಹಾಗೂ ಕಾರ್ಯಕ್ರಮದ ಆಯೋಜಕ ಕೊಲ್ಲಿರ ಉಮೇಶ್, ನಿವೃತ ಸೈನಿಕ ಪಟ್ಟಡ ಕರುಂಬಯ್ಯ, ಪ್ರಮುಖರುಗಳಾದ ಕೊಲ್ಲಿರ ಗಯಾ, ಕೊಣಿಯಂಡ ಬೋಜಮ್ಮ, ಶಾಂತೆಯಂಡ ಮಧು ಮಾಚಯ್ಯ, ಸಣ್ಣುವಂಡ ರಜನ್ ತಿಮ್ಮಯ್ಯ ಭಾಗವಹಿಸಿದ್ದರು.
ಹೊಸೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಿತು. ಹೊಸೂರು ಮತ್ತು ಕಳತ್ಮಾಡು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಗ್ರಾ.ಪಂ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಪಿಡಿಓ ಶ್ರೀನಿವಾಸ್, ಹಿರಿಯರಾದ ಶ್ರೀನಿವಾಸ್ ಭಟ್ ಇದ್ದರು. ಕಳತ್ಮಾಡು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಿಆರ್ಪಿ ಜೈಸಿ, ಅಜಿತ ಮತ್ತು ಸುರೇಂದ್ರ ಭಾಗವಹಿಸಿದರು.
ಕಾಪ್ಸ್ನಲ್ಲಿ: ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಯೋಗ ಆಚರಿಸಿದರು. ಎನ್ಸಿಸಿ ಕೆಡೆಟ್ಗಳು ಪಾಲ್ಗೊಂಡರು. ಯೋಗ ಶಿಕ್ಷಕಿ ಗಿರಿಜಾ ಅಂಗಡಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 950 ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗಾಭ್ಯಾಸದ ಮೂಲಕ ದಿನಾಚರಣೆಗೆ ಮೆರಗು ನೀಡಿದರು.
ಬಾಳೆಲೆ: ಬಾಳಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆ, ಪೊನ್ನಪ್ಪಸಂತೆ ಎಮ್ಸಿಎಸ್ ಪ್ರೌಢಶಾಲೆಯಲ್ಲಿ ಹಾಗೂ ಕುಟ್ಟ ಸಿಂಕೋನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಾಭ್ಯಾಸದ ಮೂಲಕ ಯೋಗ ದಿನವನ್ನು ಆಚರಿಸಲಾಯಿತು.
ಕಾವೇರಿ ಕಾಲೇಜು: ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಪ್ರತಿಮೆ ಎದುರು ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಯೋಗ ಪ್ರದರ್ಶನ ನಡೆಯಿತು. ಅತಿಥಿಯಾಗಿ ಕರ್ನಲ್ (ನಿ) ಕರುಂಬಯ್ಯ ಪಾಲ್ಗೊಂಡು ಯೋಗದ ಮಹತ್ವವನ್ನು ತಿಳಿಸಿದರು. ಕಾವೇರಿ ಕಾಲೇಜು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಅಲ್ಲಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನ ನಡೆಸಿಕೊಟ್ಟರು. ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಉಷಾಲತಾ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ ಉದ್ಘಾಟನೆ ಮಾಡಿದರು.
ಸಾಮೂಹಿಕವಾಗಿ ಯೋಗ ದಿನಾಚರಣೆ
ಗೋಣಿಕೊಪ್ಪಲು: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಕಾಲೇಜು, ವಿವಿಧ ಸಂಘ ಸಂಸ್ಥೆಗಳು ಆಚರಿಸಿದವು.
ಪೆÇನ್ನಂಪೇಟೆ ರಾಮಕೃಷ್ಣ ಆಶ್ರಮ ಮತ್ತು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಯೋಗ ಕಾಲೇಜು ವತಿಯಿಂದ ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಬೆಳಿಗ್ಗೆ 9 ಗಂಟೆಗೆ ಯೋಗ ನಡೆಸಲಾಯಿತು. ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು ಎಂದು ಆಶ್ರಮದ ಅಧ್ಯಕ್ಷ ಬೋಧಸ್ವರೂಪನಂದಾಜೀ ಮಹಾರಾಜ್ ತಿಳಿಸಿದ್ದಾರೆ. ಕೈಕೇರಿ ಪತಂಜಲಿ ಯೋಗ ಕೇಂದ್ರ ವತಿಯಿಂದ ಕೈಕೇರಿ ಭಗವತಿ ದೇವಸ್ಥಾನದಲ್ಲಿ ಯೋಗ ನಡೆಯಿತು. ಯೋಗ ಗುರು ಗುರುರಂಗಯ್ಯ ಬಳ್ಳಾಳ್ ಅವರು ನಡೆಸಿಕೊಟ್ಟರು.
ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು ಭಾಗವಹಿಸಿ ಯೋಗ ನಡೆಸಿದರು. ಯೋಗ ಗುರು ಗಿರಿಜಾ ಆಂಗಡಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಯೋಗ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಅವರು ವಿದ್ಯಾರ್ಥಿಗಳಿಗೆ ಯೋಗದಿಂದ ಆರೋಗ್ಯ ಮತ್ತು ಆಯುಷ್ಯವನ್ನು ಕಾಪಾಡಿಕೊಳ್ಳಬಹುದು. ಋಷಿ ಮುನಿಗಳು ಹಿಂದೆ ಯೋಗದಿಂದ ವಿವಿಧ ಸಾಧನೆಗಳನ್ನು ಮಾಡುತ್ತಿದ್ದರು ಎಂದು ತಿಳಿಸಿದರು. ಅರುವತ್ತೊಕ್ಲು ಸರ್ವದೇವತಾ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕಿ ಶೀಲಾ ಬೋಪಣ್ಣ ನೇತೃತ್ವದಲ್ಲಿ ಯೋಗ ಮಾಡುವ ಮೂಲಕ ಯೋಗದ ಮಹತ್ವವನ್ನು ಅರಿತರು.