ಭಾಗಮಂಡಲ, ಜೂ. 21: ಇಲ್ಲಿಗೆ ಸನಿಹದ ಅಯ್ಯಂಗೇರಿ ಗ್ರಾಮ ಪಂಚಾಯತ್ ಬಳಿ ಇರುವ ಸೇತುವೆ ಬಳಿ ವಾಹನವೊಂದಕ್ಕೆ ದಾರಿ ಬಿಡಲು ಹೋಗಿ ಪಿಕ್‍ಅಪ್ ಜೀಪು ಸೇತುವೆಯ ಬಳಿ ಮುಗುಚಿ ಅದೃಷ್ಟವಶಾತ್ ಚಾಲಕ ಸೇರಿದಂತೆ ಇಬ್ಬರು ಅಪಾಯದಿಂದ ಪಾರಾಗಿರುವ ಘಟನೆ ಇಂದು ನಡೆದಿದೆ,

ಸೇತುವೆಯ ಕೆಳಭಾಗಕ್ಕೆ ಬಾಗಿ ಜೀಪು ನಿಂತಿದೆ, ಇದೇ ಸ್ಥಳದಲ್ಲಿ ತಿಂಗಳಿಗೆ 2,3 ವಾಹನ ಅವಘಡಗಳು ಇಲ್ಲಿ ಸಂಭವಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಹೆಸರಿಗೆ ಮಾತ್ರ ತಲಕಾವೇರಿ - ಹುಣಸೂರು ಹೆದ್ದಾರಿಯಾಗಿದ್ದು, ಈ ರಸ್ತೆಯ ದುರಸ್ತಿ ಕಾರ್ಯಗಳು ನಡೆಯದೆ ವರ್ಷಗಳೇ ಕಳೆದಿವೆ. ಈ ಸೇತುವೆಯ ಬಳಿ ಎರಡು ಬದಿ ಕುಸಿದು ಹೋಗಿದ್ದು, ಅಪಾಯ ಸ್ಥಿತಿಯಲ್ಲಿದೆ. ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗದೇ ಇದ್ದಲ್ಲಿ ಅಪಾಯ ತಪ್ಪಿದ್ದಲ್ಲ. ರಸ್ತೆಯ ಒಂದು ಬದಿಯಲ್ಲಿ ಕೇಬಲ್ ಅಳವಡಿಕೆಗೆ ಗುಂಡಿ ತೋಡಿ ಸರಿಯಾಗಿ ಮುಚ್ಚದೆ ರಸ್ತೆ ಬದಿಗಳಲ್ಲಿ ನೀರು ಹೋಗಲು ಚರಂಡಿ ಇಲ್ಲದೆ, ಮಣ್ಣು ಮಿಶ್ರಿತ ನೀರು ರಸ್ತೆಗೆ ಹರಿದು ಬಂದು ವಾಹನ ಸವಾರರಿಗೆ ಕಷ್ಟಕರವಾಗುತ್ತಿದೆ. ಚರಂಡಿಯಲ್ಲಿ ಹೋಗ ಬೇಕಾದ ನೀರು ರಸ್ತೆಯಲ್ಲಿ ಹೋಗುತ್ತಿದ್ದು, ರಸ್ತೆಯುದ್ದಕ್ಕೂ ಭೂ ಕುಸಿತಗಳು ಉಂಟಾಗಿದೆ.

- ಸುನಿಲ್ ಕೆ.ಡಿ.