*ಗೋಣಿಕೊಪ್ಪಲು, ಜೂ. 21: ಸರ್ಕಾರಿ ಹಿಂದುಳಿದ ವರ್ಗದ ವಸತಿ ನಿಲಯಗಳಲ್ಲ್ಲಿ ಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಬಾಣಸಿಗರಾಗಿ ದುಡಿದವರಿಗೀಗ ಬಾಣಲೆಗೆ ಬಿದ್ದ ಸ್ಥಿತಿಯಾಗಿದೆ.

ಸರ್ಕಾರದ ಆದೇಶದಿಂದ ಗುತ್ತಿಗೆ ಆಧಾರದ ಮೇಲೆ ಅಡುಗೆ ಕೆಲಸ ನಿರ್ವಹಿಸುತ್ತಿದ್ದ, ಜಿಲ್ಲೆಯ ಬಿ.ಸಿ.ಎಂ. ಹಾಸ್ಟೇಲಿನÀ ಸಿಬ್ಬಂದಿಗಳ ಪರಿಸ್ಥಿತಿ ಈಗ ಅತಂತ್ರವಾಗಿದೆ.

ಹತ್ತು ಹದಿನೈದು ವರ್ಷಗಳಿಂದ ಜೆಮಿನಿ ಸೆಕ್ಯೂರಿಟಿ ಸಂಸ್ಥೆಯ ಮೂಲಕ ಅಡುಗೆ ಕೆಲಸ ನಿರ್ವಹಿಸುತ್ತಿದ್ದವರೀಗ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜೀವನೋಪಾಯಕ್ಕೆ ಮತ್ತೊಂದು ಹಾದಿಯನ್ನು ನೋಡುವ ಸ್ಥಿತಿ ಉಂಟಾಗಿದೆ. ಕಳೆದ ಒಂದು ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಹಾಸ್ಟೆಲ್‍ಗಳಿಗೆ ನೇರ ನೇಮಕಾತಿ ಮೂಲಕ ಸಿಬ್ಬಂದಿಗಳ ಆಯ್ಕೆ ನಡೆದಿದೆ. ಪರಿಣಾಮ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಅಡುಗೆ ಕೆಲಸ ನಿರ್ವಹಿಸುವವರನ್ನೀಗ ಹೊರ ದಬ್ಬಲಾಗುತ್ತಿದೆ. ಹೀಗಾಗಿ ಜೀವನಕ್ಕೆ ಬೇರೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಾಭ್ರಾಂತರಾಗಿ ಹೋರಾಟದ ಹಾದಿ ತುಳಿಯಲು ಸನ್ನಧರಾಗಿದ್ದಾರೆ. ವೀರಾಜಪೇಟೆ ತಾಲೂಕಿನ 29 ತಾತ್ಕಾಲಿಕ ನೌಕರರು ಮತ್ತು ಮಡಿಕೇರಿ ತಾಲ್ಲೂಕಿನ 30 ನೌಕರರು ಹಾಗೂ ಸೋಮವಾರಪೇಟೆ ತಾಲ್ಲೂಕಿನ 30ಕ್ಕೂ ಹೆಚ್ಚು ನೌಕರರು ಇದೀಗ ತಮ್ಮ ಕೈಯ್ಯಲ್ಲಿದ್ದ ಸೌಟನ್ನು ಬಿಟ್ಟು ಹೊರ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. 15 ವರ್ಷಗಳಿಂದ ಅತಿ ಅಲ್ಪ ವೇತನದಲ್ಲಿ ಅಡುಗೆ ಮಾಡಿ ವಿದ್ಯಾರ್ಥಿಗಳಿಗೆ ಬಡಸುತ್ತಿದ್ದವರೀಗ ಸರ್ಕಾರದ ಆದೇಶದಿಂದ ಧೃತಿಗೆಟ್ಟಿದ್ದಾರೆ. ತಾಲೂಕಿನ ಪೆÇನ್ನಂಪೇಟೆ, ಗೋಣಿಕೊಪ್ಪಲು, ಹುದಿಕೇರಿ, ಶ್ರೀಮಂಗಲ, ಬಿರುನಾಣಿ ಭಾಗಗಳಲ್ಲಿರುವ ವಸತಿ ನಿಲಯಗಳಿಗೀಗ ನೂತನ ಅಡುಗೆ ನೌಕರರ ನೇಮಕಾತಿ ನಡೆದಿದೆ. ಇದರ ಅನ್ವಯ ಮುಂದಿನ ದಿನಗಳಲ್ಲಿ ನೇಮಕವಾದ ನೂತನ ನೌಕರರೇ ಅಡುಗೆ ಕೆಲಸಕ್ಕೆ ಹಾಜರಾಗುತ್ತಾರೆ. ಪರಿಣಾಮ ಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದವರ ಸ್ಥಿತಿ ಬೀದಿಗೆ ಬಿದ್ದಿದೆ. ನಮಗೂ ಒಂದು ಅವಕಾಶ ಕೊಡಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ ಎಂಬ ಧ್ವನಿಯೊಂದಿಗೆ ಇಲಾಖೆಯ ಬಾಗಿಲು ಬಡಿಯುತ್ತಿದ್ದಾರೆ. ಸರ್ಕಾರ ನಮ್ಮನ್ನು ವಂಚಿಸದೆ ನ್ಯಾಯ ಒದಗಿಸಿಕೊಡಲಿ ಎಂಬ ಕೂಗಿನ ಹೋರಾಟದೊಂದಿಗೆ ಜಿಲ್ಲಾಧಿಕಾರಿಯವರ ಕಚೇರಿಯ ಎದುರು ಅಮರಣಾಂತರ ಉಪವಾಸ ಪ್ರತಿಭಟನೆ ಮಾಡುತ್ತೇವೆ ಎಂದು ಗುತ್ತಿಗೆ ಆದಾರದ ಅಡುಗೆ ನೌಕರರು ತಿಳಿಸಿದ್ದಾರೆ. ಇದೀಗಾಗಲೇ ಸಂಸದ ಪ್ರತಾಪ್ ಸಿಂಹ ಹಾಗು ಶಾಸಕ ಕೆ.ಜಿ. ಬೋಪಯ್ಯ ಅವರಿಗೂ ಮನವಿ ಸಲ್ಲಿಸಿದ್ದೇವೆ. ನಮ್ಮ ಕೂಗಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂಬ ಭರವಸೆ ಇದೆ ಎಂಬ ನಂಬಿಕೆ ನಮ್ಮದಾಗಿದೆ.

ಚಿತ್ರ -ವರದಿ : ದಿನೇಶ್ ಎನ್.ಎನ್.