ಕೂಡಿಗೆ, ಜೂ. 21 : ಕುಶಾಲನಗರ ಹೋಬಳಿಯು ವೇಗವಾಗಿ ಬೆಳೆಯುತ್ತಿರುವಂತೆಯೇ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಇದೆ. ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿ ಮತ್ತು ಒಂದು ಪಟ್ಟಣ ಪಂಚಾಯಿತಿಯಿದ್ದು, ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಗಿಂತಲೂ ವಾಹನಗಳ ಸಂಖ್ಯೆಯು ಹೆಚ್ಚುತ್ತಿದೆ. ಅಲ್ಲದೆ, ದಿನಂಪ್ರತಿ ಒಂದಲ್ಲ ಒಂದು ವಾಹನ ಅಪಘಾತಗಳು ಸಂಭವಿಸುತ್ತಲೇ ಇದೆ. ಪೊಲೀಸ್ ಇಲಾಖೆಯ ವತಿಯಿಂದ ಸೂಚಿಸಿದರೂ, ಸಂಚಾರ ನಿಯಮವನ್ನು ಪಾಲಿಸದೆ ವಾಹನವನ್ನು ಚಾಲನೆ ಮಾಡುವ ಅನೇಕ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಹೆಲ್ಮೆಟ್ ಧರಿಸುವದು ಕಡ್ಡಾಯವಾಗಿದ್ದರೂ, ಹೆಲ್ಮೆಟ್ ಧರಿಸದೆ, ಪಾನಮತ್ತರಾಗಿ ವಾಹನ ಚಲಾಯಿಸುವದು, ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಹೊಂದಿದೆ ದಿನಕ್ಕೆ 250 ರಿಂದ 300 ವಾಹನ ಸವಾರರ ಸಂಚಾರಿ ನಿಯಮವನ್ನು ಪಾಲಿಸದೆ ವಾಹನವನ್ನು ಚಲಾಯಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸರು ಕೂಡ್ಲೂರು ಕೈಗಾರಿಕಾ ಬಡಾವಣೆ ರಾಜ್ಯ ಹೆದ್ದಾರಿ, ಕುಶಾಲನಗರ, ಗುಡ್ಡೆಹೊಸೂರು ರಾಷ್ಟ್ರೀಯ ಹೆದ್ದಾರಿ ವಾಹನಗಳನ್ನು ತಡೆದು ವಾಹನ ದಾಖಲಾತಿಗಳ ಪರಿಶೀಲನೆ ಮಾಡುತ್ತಿದ್ದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರಿಗೆ ದಂಡ ವಿಧಿಸಿ ಸಂಚಾರಿ ನಿಯಮ ಪಾಲಿಸುವಂತೆ ಸೂಚನೆ ನೀಡುತ್ತಿದ್ದಾರೆ.
ತಪಾಸಣೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಮತ್ತು ಸಿಬ್ಬಂದಿ ವರ್ಗದವರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.