ಮಡಿಕೇರಿ, ಜೂ. 21: ದಕ್ಷ ಹಾಗೂ ಪ್ರಾಮಾಣಿಕ ರೀತಿಯಲ್ಲಿ ಪಕ್ಷವನ್ನು ಬೆಳೆಸುತ್ತಾ ಬರುತ್ತಿರುವ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಕೆಲವರು ತೆರೆಯ ಮರೆಯಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ಜಿಲ್ಲಾ ಜೆ.ಡಿ.ಎಸ್. ಸಂಘಟನಾ ಕಾರ್ಯದರ್ಶಿ ಬಿ.ಎಂ. ಧರ್ಮಪ್ಪ ಆರೋಪಿಸಿದ್ದಾರೆ.

ಪಕ್ಷದೊಳಗಿರುವ ಕೆಲವು ಸ್ವಾರ್ಥ ಸಾಧಕರು ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೈಬಿಡುವಂತೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಲ್ಲಿ ಒತ್ತಡ ಹೇರುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ಷಡ್ಯಂತ್ರವನ್ನು ತಾನು ಖಂಡಿಸುವದಾಗಿ ಧರ್ಮಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಕೇತ್ ಪೂವಯ್ಯ ಅವರ ಶ್ರಮದ ಫಲವಾಗಿ ಕೊಡಗಿನಲ್ಲಿ ಜೆ.ಡಿ.ಎಸ್. ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಜಿಲ್ಲೆಯ ಯಾವದೇ ಪ್ರದೇಶದಲ್ಲಿ ರೈತರು, ಆದಿವಾಸಿಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿದಾಗ ಸ್ಥಳಕ್ಕೆ ತೆರಳಿ ತಮ್ಮ ಸ್ವಂತ ಹಣದಿಂದ ಪರಿಹಾರ ನೀಡುವ ವಿಶಾಲ ಮನೋಭಾವದ ಸಂಕೇತ್ ಪೂವಯ್ಯ ಪಕ್ಷಕ್ಕೆ ಅನಿವಾರ್ಯವಾಗಿದ್ದು, ಯಾವದೇ ಕಾರಣಕ್ಕೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಕೂಡದು ಎಂದು ಧರ್ಮಪ್ಪ ಹೇಳಿದ್ದಾರೆ.

ಸಂಕೇತ್ ಪೂವಯ್ಯ ಅವರು ಡಿ.ವೈ.ಎಸ್.ಪಿ. ಗಣಪತಿ ಪ್ರಕರಣದಲ್ಲಿ ಕುಟುಂಬದವರಿಗೆ ನ್ಯಾಯ ಒದಗಿಸುವಲ್ಲಿ ಶಕ್ತಿಮೀರಿ ಶ್ರಮಿಸಿದ್ದು, ಜಿಲ್ಲೆಯ ಎಲ್ಲಾ ಜನಾಂಗ ಬಾಂಧವ ರೊಂದಿಗೆ ಸೌಹಾರ್ಧತೆಯಿಂದ ವರ್ತಿಸುವ ಜನಾನುರಾಗಿ ವ್ಯಕ್ತಿತ್ವದವ ರಾಗಿದ್ದಾರೆ.

ಇವರ ಸೇವೆ ಪಕ್ಷಕ್ಕೆ ಅನಿವಾರ್ಯವಾಗಿದೆ ಎಂದಿರುವ ಧರ್ಮಪ್ಪ, ಪಕ್ಷಾಧ್ಯಕ್ಷರ ಬದಲಾವಣೆಗೆ ತೆರೆಮರೆಯಲ್ಲಿ ಯಾರ್ಯಾರು ಪಿತೂರಿ ನಡೆಸುತ್ತಿದ್ದಾರೆ ಎಂಬದರ ಬಗ್ಗೆ ತಮಗೆ ಅರಿವಿದೆ, ಅದನ್ನು ಸದ್ಯದಲ್ಲೇ ಬಹಿರಂಗ ಪಡಿಸುವದಾಗಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಎ. ಜೀವಿಜಯ ಅವರ ಸೋಲಿಗೆ ಅವರಿಂದ ಹಣ ಪಡೆದುಕೊಂಡು ಸ್ವಾರ್ಥಕ್ಕಾಗಿ ಬಳಸಿಕೊಂಡವರೇ ಕಾರಣಕರ್ತ ರಾಗಿದ್ದು, ಇದೆಲ್ಲವನ್ನೂ ಸದ್ಯದಲ್ಲೇ ತಾನು ಬಹಿರಂಗ ಪಡಿಸಲಿದ್ದೇನೆ ಎಂದು ಧರ್ಮಪ್ಪ ಹೇಳಿದ್ದಾರೆ.