ಮಡಿಕೇರಿ, ಜೂ. 21 : ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವದಕ್ಕಾಗಿ ಗ್ರಾಮ ಪಂಚಾಯ್ತಿಗಳು ತರಾತುರಿಯಲ್ಲಿ ಅರ್ಜಿ ಸ್ವೀಕಾರಕ್ಕೆ ಮುಂದಾಗಿದ್ದು, ಹೊಸ ಅರ್ಜಿಗಳಿಗೂ ಮೊದಲು ಕೊಡಗಿನ ದೀನ ದಲಿತರು ಹಾಗೂ ಕೂಲಿ ಕಾರ್ಮಿಕರು ಈ ಹಿಂದೆ ಸಲ್ಲಿಸಿರುವ ಅರ್ಜಿಗಳನ್ನು ಮೊದಲು ಪರಿಗಣಿಸಬೇಕೆಂದು ಯುನೈಟೆಡ್ ಪ್ಲಾಂಟೇಷನ್ಸ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಮತ್ತು ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಯಾರ ಗಮನಕ್ಕೂ ತಾರದೆ, ಗ್ರಾಮ ಪಂಚಾಯ್ತಿಗಳ ಮೂಲಕ ನಿವೇಶನ ಹಂಚಿಕೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತರಾತುರಿಯಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 25 ಕಡೆಯ ದಿನವೆಂದು ಹೇಳಲಾಗುತ್ತಿದೆ. ಆದರೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಎಐಟಿಯುಸಿ ಸಂಘಟನೆ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸುತ್ತಲೆ ಬರುತ್ತಿದೆ. ಇಲ್ಲಿಯವರೆಗೆ ಈ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯ ನಡೆದಿಲ್ಲ. ಹಳೆಯ ಅರ್ಜಿಗಳನ್ನು ಮೊದಲು ಪರಿಗಣಿಸಿ ಇದರ ವರದಿಯನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೋಮಪ್ಪ ಒತ್ತಾಯಿಸಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವದರಿಂದ ನಿವೇಶನಕ್ಕಾಗಿ ಅರ್ಜಿ ಸ್ವೀಕರಿಸುವ ಚುನಾವಣಾ ಗಿಮ್ಮಿಕ್ ನಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ ಅವರು, ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭ ಮಾತ್ರ ನಿವೇಶನ ಹಂಚುವ ಹುಸಿ ಭರವಸೆಯನ್ನು ನೀಡುತ್ತಲೇ ಬಂದಿವೆ ಎಂದು ಆರೋಪಿಸಿದರು. ಸ್ವಾತಂತ್ರ್ಯ ಬಂದು 70 ವರ್ಷಗಳೆ ಕಳೆದಿದ್ದರೂ ಜಿಲ್ಲೆಯ ದೀನದಲಿತರು ಹಾಗೂ ಕಾರ್ಮಿಕರು ಸ್ವಂತ ಸೂರಿಲ್ಲದೆ, ಲೈನ್ ಮನೆಗಳಲ್ಲೆ ಜೀವನ ಕಳೆಯಬೇಕಾದ ದುಸ್ಥಿತಿ ಇದೆ.
ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ ಬಡವರಿಗೆ ಹಂಚುವಂತೆ ಒತ್ತಾಯಿಸುತ್ತಲೇ ಬಂದಿದ್ದರೂ, ಹಿರಿಯ ಅಧಿಕಾರಿಗÀಳು ಯಾವದೇ ಕ್ರಮ ಕೈಗೊಂಡಿಲ್ಲವೆಂದು ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕುಂಬೂರು ಗ್ರಾಮದಲ್ಲಿ 29 ಎಕರೆ ಹಾಗೂ ಬಿಳಿಗೇರಿ ಗ್ರಾಮದಲ್ಲಿ 46 ಎಕರೆ ಪೈಸಾರಿ ಜಾಗ ಬಂಡವಾಳಶಾಹಿಗಳ ವಶದಲ್ಲಿದ್ದು, ಇದರ ಆರ್ಟಿಸಿಯನ್ನು ಜಿಲ್ಲಾಡಳಿತಕ್ಕೆ ನೀಡಿ, ಒತ್ತುವರಿ ತೆರವಿಗೆ ಒತ್ತಾಯಿಸಿದ್ದರೂ ಇಲ್ಲಿಯವರೆಗೆ ತೆರವು ಕಾರ್ಯಾಚರಣೆ ನಡೆಸಿಲ್ಲವೆಂದು ಆರೋಪಿಸಿದರು.
ಉಳ್ಳವರ ಬಳಿ ಅಕ್ರಮವಾಗಿ ಇರುವ ಪೈಸಾರಿ ಜಮೀನನ್ನು ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡದಿದ್ದಲ್ಲಿ ದಿಡ್ಡಳ್ಳಿ ಮಾದರಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಸೋಮಪ್ಪ ಎಚ್ಚರಿಕೆ ನೀಡಿದರು.
ಆದಿ ದ್ರಾವಿಡ ಎಂದು ನಮೂದಿಸಿ
ಜಾತಿ ದೃಢೀಕರಣ ಪತ್ರದಲ್ಲಿ ಆದಿದ್ರಾವಿಡ ಜಾತಿಯನ್ನು ನಮೂದಿಸದೆ ಇರುವದರಿಂದ ಈ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ವರ್ಷಗಳಿಂದ ಜಾತಿ ದೃಢೀಕರಣ ಪತ್ರದಲ್ಲಿ ಆದಿ ದ್ರಾವಿಡ ಎಂದು ನಮೂದಿಸುವಂತೆ ಮನವಿ ಮಾಡಿಕೊಂಡು ಬಂದಿದ್ದರೂ ಆಗಿಂದಾಗ್ಗೆ ಅಧಿಕಾರಿಗಳು ಬದಲಾಗುತ್ತಿರುವದರಿಂದ ಮಾಹಿತಿಯ ಕೊರತೆ ಎದುರಾಗಿ ಆದಿ ದ್ರಾವಿಡ ಎಂದು ನಮೂದಿಸಲು ಸಾಧ್ಯವಾಗುತ್ತಿಲ್ಲವೆಂದು ಸೋಮಪ್ಪ ತಿಳಿಸಿದರು.
ಈ ವಿಚಾರದಲ್ಲಿ ಜಿಲ್ಲೆಯಾದ್ಯಂತ ನಾಡಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವದೆಂದು ತಿಳಿಸಿದ ಅವರು, ಮೊದಲ ಹಂತದ ಪ್ರತಿಭಟನೆ ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದರು.
ಆದಿದ್ರಾವಿಡ ಸೇವಾ ಸಮಾಜದ ಗೌರವಾಧ್ಯಕ್ಷ ಪಿ.ವಿ. ಬಾಬು ಮಾತನಾಡಿ, ಜಾತಿ ದೃಢೀಕರಣ ಪತ್ರದಲ್ಲಿ ಆದಿ ದ್ರಾವಿಡವೆಂದು ನಮೂದಿಸುವಂತೆ ಒತ್ತಾಯಿಸಿ ತಾ.25 ರಂದು ಸುಂಟಿಕೊಪ್ಪ ನಾಡಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದೆಂದು ತಿಳಿಸಿದರು.
ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಸೋಮವಾರಪೇಟೆ ಕಾರ್ಯದರ್ಶಿ ಪಿ.ಟಿ. ಸುಂದರ, ಆದಿದ್ರಾವಿಡ ಸಮಾಜದ ಉಪಾಧ್ಯಕ್ಷ ಪಿ.ಎಲ್. ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.