ಮಡಿಕೇರಿ, ಜೂ. 21: ಪ್ರತಿಯೊಬ್ಬರ ಆರೋಗ್ಯ ರಕ್ಷಣೆಯ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಜಾರಿಗೆ ಬಂದಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇಂದು ನಾಡಿನೆಲ್ಲೆಡೆ ಆಚರಿಸಲ್ಪಟ್ಟಿತು. ಯೋಧರ ನಾಡು ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಜಿಲ್ಲೆಯಲ್ಲೂ ಕೂಡ ಯೋಗ ದಿನಾಚರಣೆ ನಡೆಯಿತು. ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಸೇರಿದಂತೆ ಜಿಲ್ಲೆಯ ಹಲವೆಡೆ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲ್ಪಟ್ಟಿತು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಮೈತ್ರಿ ಸಭಾಂಗಣದಲ್ಲಿ ಯೋಗ ಆಚರಣೆ ಮಾಡಲಾಯಿತು. ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡು ಯೋಗ ಮಾಡಿದರು. ಶಾಸಕರುಗಳಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಉಪವಿಭಾಗಾಧಿಕಾರಿ ರಮೇಶ್ ಕೋನರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ, ಡಿ.ಡಿ.ಪಿ.ಐ. ಮಂಜುಳಾ, ಡಿ.ವೈ.ಎಸ್.ಪಿ. ಸುಂದರರಾಜ್, ನಗರ ಠಾಣಾಧಿಕಾರಿ ಷಣ್ಮುಗಂ, ಎನ್.ಸಿ.ಸಿ.ಯ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ. ನಾಯಕ್ ಇವರುಗಳು ಕೂಡ ಯೋಗದಲ್ಲಿ ಪಾಲ್ಗೊಂಡರು.
ಯೋಗ ಪರಿಣಿತರಾದ ಡಾ. ಕಾವ್ಯ, ಬಾಹುಬಲಿ, ವೀಣಾ, ದೀಪಕ್, ಕೆ.ಕೆ. ಮಹೇಶ್ ಕುಮಾರ್ ಇವರುಗಳು ವಜ್ರಾಸನ, ಭುಗಂಗಾಸನ, ವೃಕ್ಷಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ತೋರಿಸಿಕೊಟ್ಟರು. ಸುಮಾರು 1 ಗಂಟೆಗಳ ಕಾಲ ನಡೆದ ಯೋಗಭ್ಯಾಸದಲ್ಲಿ ಸರಕಾರಿ ಅಧಿಕಾರಿಗಳು, ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಮುಖರ ಪ್ರತಿಕ್ರಿಯೆ
ಯೋಗ ದಿನಾಚರಣೆಯ ಕುರಿತು ಮಾಧ್ಯಮಗಳೊಂದಿಗೆ ಹಲವು ಪ್ರಮುಖರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪ್ರಧಾನಿ ಮೋದಿಯವರ ಆಶಯದಂತೆ ಎಲ್ಲೆಡೆ ಯೋಗ ದಿನಾಚರಣೆ ನಡೆಯುತ್ತಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಯೋಗ ದಿನಾಚರಣೆಯಿಂದ ಮಾನಸಿಕ ಒತ್ತಡ ನಿವಾರಣೆ ಹಾಗೂ ಆರೋಗ್ಯ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರತಿಕ್ರಿಯಿಸಿ ಯೋಗ ನಮ್ಮ ಸಂಸ್ಕøತಿಯ ಒಂದು ಭಾಗವಾಗಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಕೂಡ ಇದು ಸಹಕಾರಿಯಾಗಲಿ ಎಂದು ನುಡಿದರು.
ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಂದಿ ಸದಾ ಒತ್ತಡದಲ್ಲಿರುತ್ತಾರೆ.
(ಮೊದಲ ಪುಟದಿಂದ) ಅಂತಹ ಒತ್ತಡದಿಂದ ಹೊರ ಬರಲು ಯೋಗ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಬಾರಿ ನಡೆಯುವ ಪೆರೇಡ್ನಲ್ಲಿ ಯೋಗವನ್ನು ಕೂಡ ಕಡ್ಡಾಯಗೊಳಿಸಲಾಗುವದು ಎಂದು ತಿಳಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರುಗಳು, ಜಿಲ್ಲಾಧಿಕಾರಿಗಳೊಂದಿಗೆ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಆಯುಷ್ ಇಲಾಖಾಧಿಕಾರಿ ರಾಮಚಂದ್ರ, ಡಾ. ಶ್ರೀನಿವಾಸ್, ಡಾ. ಪಾಟ್ಕರ್ ಮತ್ತಿತರರು ಹಾಜರಿದ್ದರು.
ಸಂತ ಜೋಸೆಫರ ಶಾಲೆಯಲ್ಲಿ ಯೋಗಭ್ಯಾಸ ಮಾಡಲಾಯಿತು. ಇಲ್ಲಿನ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳಿಗೆ ಉಜಿರೆಯ ಡಾ|| ಕಾವ್ಯ, ದೀಪಕ್, ಬಾಹುಬಲಿ ಮತ್ತು ಮಡಿಕೇರಿಯ ಯೋಗ ಗುರು ಮಹೇಶ್ ಕುಮಾರ್ ಯೋಗಭ್ಯಾಸ ನಡೆಸಿಕೊಟ್ಟರು.