ಮಡಿಕೇರಿ, ಜೂ. 21: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಯಿಂದ ಕೊಡಗಿನ ಬಹುತೇಕ ಕಡೆಗಳಲ್ಲಿ ಉಂಟಾಗಿದ್ದ ವಿದ್ಯುತ್ ಸಮಸ್ಯೆಯನ್ನು ಇದೀಗ ಬಹುತೇಕ ಸರಿಪಡಿಸಲಾಗಿದೆ. ಶೇ. 95 ರಷ್ಟು ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವಾರಾಂತ್ಯದಲ್ಲಿ ಜಿಲ್ಲೆಯಾದ್ಯಂತ ವಿದ್ಯುತ್ ವ್ಯವಸ್ಥೆ ಸಮರ್ಪಕಗೊಳ್ಳಲಿದೆ ಎಂದು ಸೆಸ್ಕ್‍ನ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ಎದುರಾಗಿದ್ದ ಸಮಸ್ಯೆಗಳನ್ನು ಬಹುತೇಕ ನಿವಾರಿ ಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಈ ವಾರಾಂತ್ಯದಲ್ಲಿ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ವ್ಯವಸ್ಥೆ ಸರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕಿನ ಮೂರ್ನಾಡು, ನಾಪೋಕ್ಲು, ಮರಗೋಡು, ಗಾಳಿಬೀಡು ವಿಭಾಗದಲ್ಲಿ ಸಮಸ್ಯೆ ಉಂಟಾಗಿದ್ದರೆ, ವೀರಾಜಪೇಟೆ ತಾಲೂಕಿನ ಶ್ರೀಮಂಗಲ, ಕುಟ್ಟ, ತಿತಿಮತಿ, ಬಾಳಲೆ, ಬಿರುನಾಣಿ ಕಡೆಗಳಲ್ಲಿ ಹೆಚ್ಚು ಹಾಗೂ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಸೂರ್ಲಬ್ಬಿ ಕಡೆಗಳಲ್ಲಿ ತೀರಾ ಹೆಚ್ಚು ಸಮಸ್ಯೆ ತಲೆದೋರಿತ್ತು. ಜಿಲ್ಲೆಯಾದ್ಯಂತ ಅಂದಾಜು 1400 ವಿದ್ಯುತ್ ಕಂಬಗಳು ಹಾನಿಗೀಡಾಗಿ ದ್ದವು. ಈಗಾಗಲೇ ಇಲಾಖೆಯಿಂದ ಅಗತ್ಯ ಉಪಕರಣಗಳು ಹಾಗೂ ಕಂಬವನ್ನು ತರಲಾಗಿದ್ದು, ಕೆಲಸ ಅಂತಿಮ ಹಂತ ತಲಪಿದೆ ಎಂದು ಅವರು ತಿಳಿಸಿದರು.