ಮಡಿಕೇರಿ, ಜೂ. 21: ಕೇಂದ್ರ ಸರಕಾರ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಸಮರ್ಪಕವಾಗಿ ಅನುದಾನವನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಗಳಿಗೆ ನೀಡಬೇಕಾದ ಅನುದಾನದಲ್ಲಿ ಒಂದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿ ಕೊಂಡಿದೆ. 2013ರಲ್ಲಿ ಕುಡಿಯುವ ನೀರಿನ ಪಾಲು 960 ಕೋಟಿ ರೂಪಾಯಿಗಳಾಗಿದ್ದು, 2017-18ರಲ್ಲಿ ಸುಮಾರು 300 ಕೋಟಿ ರೂಪಾಯಿಗಳು ಬರಬೇಕಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಆರೋಪಿಸಿದ್ದಾರೆ. ವಿಶೇಷವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರಕಾರ ಕೇವಲ ಶೇ. 12 ರಷ್ಟನ್ನು ನೀಡಿದೆ ಎಂದು ಆರೋಪಿಸಿದ ಅವರು ವಿಶೇಷವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ವಿಷಾದನೀಯವೆಂದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಸುರೇಶ್ ಸಂಪಾಜೆ, ಬಂಗಾರುಕೋಡಿ ಪುರುಷೋತ್ತಮ್ಮ, ಸದಾನಂದ ಬಂಗೇರ, ಕಾರ್ತಿಕ್ ನಾಣಯ್ಯ ಮತ್ತಿತರರು ಹಾಜರಿದ್ದರು.