ಸೋಮವಾರಪೇಟೆ, ಜೂ. 21: 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೋಮವಾರಪೇಟೆಯ ವಿವಿಧ ಭಾಗಗಳಲ್ಲಿ ಆಚರಿಸಲಾಯಿತು. ಶಾಲಾ ಕಾಲೇಜು ಸೇರಿದಂತೆ ಸಂಘಸಂಸ್ಥೆಗಳ ವತಿಯಿಂದ ಯೋಗ ದಿನಾಚರಣೆ ನಡೆಯಿತು.ಬೇಳೂರು ಬಾಣೆಯಲ್ಲಿ: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್, ಲಯನ್ಸ್ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಜಾನಪದ ಪರಿಷತ್, ಕರವೇ ಸಾಹಿತ್ಯ ಘಟಕ, ಪತ್ರಕರ್ತರ ಸಂಘ, ಶ್ರೀಮಾತಾ ಭಜನಾ ಮಂಡಳಿ ಸೇರಿದಂತೆ ಇತರ ಸಂಘಸಂಸ್ಥೆಗಳ ವತಿಯಿಂದ ಸಮೀಪದ ಬೇಳೂರು ಬಾಣೆಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ತುಂತುರು ಮಳೆಯ ನಡುವೆಯೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉತ್ಸಾಹದಿಂದ ಯೋಗದ ವಿವಿಧ ಪ್ರಾಕಾರಗಳಲ್ಲಿ ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕ ದೀಪಕ್ ಉಪಾಧ್ಯ ಅವರು ಮಾತನಾಡಿ, ಯೋಗಾಸನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಿರಂತರ ಯೋಗದಿಂದ ಮಾತ್ರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ. ಭಾರತದ ಪ್ರಾಚೀನ ಯೋಗ ಪ್ರಾಕಾರಗಳು ಇಂದು ವಿಶ್ವದಾದ್ಯಂತ ಪ್ರಚಲಿತದಲ್ಲಿದ್ದು, ಪ್ರಪಂಚವೇ ಯೋಗಕ್ಕೆ ಮಾರುಹೋಗಿದೆ ಎಂದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಪ್ರಪಂಚದಾದ್ಯಂತ ಯೋಗವನ್ನು ಪರಿಚಯಿಸುತ್ತಿದೆ ಎಂದ ಅವರು, ಪ್ರತಿಯೋರ್ವರೂ ಆರೋಗ್ಯವಂತರಾಗಿ ಜೀವನ ನಡೆಸಲು ದಿನನಿತ್ಯ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರೊಂದಿಗೆ ಪರಿಸರ ಕಾಳಜಿ ಹೊಂದಿ ಪ್ರತಿಯೋರ್ವರೂ ಒಂದೊಂದು ಗಿಡ ನೆಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಬೇಕೆಂದು ಕಿವಿಮಾತು ಹೇಳಿದರು.

ಸಂಸ್ಥೆಯ ಸಂಚಾಲಕಿ ರಾಗಿಣಿ, ಲಯನ್ಸ್ ಅಧ್ಯಕ್ಷ ಮಹೇಶ್,

(ಮೊದಲ ಪುಟದಿಂದ) ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್, ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್, ಜೇಸೀ ಕಾರ್ಯದರ್ಶಿ ರುಬೀನಾ, ಜಾನಪದ ಪರಿಷತ್ ಅಧ್ಯಕ್ಷ ಮುರಳೀಧರ್, ಶ್ರೀಮಾತಾ ಭಜನಾ ಮಂಡಳಿಯ ಪಂಕಜ ಶ್ಯಾಂಸುಂದರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಗೌಡ ಸಮಾಜದಲ್ಲಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ-ಆಸ್ಪತ್ರೆ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇವರ ಸಂಯಕ್ತ ಆಶ್ರಯದಲ್ಲಿ, ಸೋಮವಾರಪೇಟೆಯ ನಿರಂತರ ಯೋಗ ಕೇಂದ್ರ ಸೇರಿದಂತೆ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಗೌಡ ಸಮಾಜದ ಹಳೆ ಸಭಾಂಗಣದಲ್ಲಿ ಯೋಗ ದಿನಾಚರಣೆ ನಡೆಯಿತು.

ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ.ರವಿ ಚಾಲನೆ ನೀಡಿದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಡಾ|| ಮಂಜುಶ್ರೀ ಮಾತನಾಡಿ, ಉತ್ತಮ ಆರೋಗ್ಯ, ಜೀವನ ಶೈಲಿಯ ಬದಲಾವಣೆ, ಮಾನಸಿಕ ಒತ್ತಡದ ನಿವಾರಣೆಗೆ ಪ್ರತಿಯೊಬ್ಬರಿಗೂ ಯೋಗಾಭ್ಯಾಸ ಅವಶ್ಯಕವಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಡಾ|| ಸೋನಿ, ಉದ್ಯಮಿ ಬಿ.ಎಸ್. ಶ್ರೀಧರ್, ಪುಷ್ಪಗಿರಿ ಜೇಸಿ ಅಧ್ಯಕ್ಷ ಪ್ರಕಾಶ್, ಯೋಗ ತರಬೇತುದಾರ ಕಿಬ್ಬೆಟ್ಟ ಗಣೇಶ್ ಉಪಸ್ಥಿತರಿದ್ದರು. ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಕೊಡ್ಲಿಪೇಟೆಯಲ್ಲಿ: ಕೊಡ್ಲಿಪೇಟೆಯ ಕಿರಿಕೊಡ್ಲಿ ಶ್ರೀ ಸದಾಶಿವ ಸ್ವಾಮೀಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಠಾಧೀಶರಾದ ಸದಾಶಿವ ಸ್ವಾಮೀಜಿ ವಹಿಸಿದ್ದರು. ಎಸ್.ಜಿ.ಎಸ್. ವಿದ್ಯಾಪೀಠದ ಕಾರ್ಯದರ್ಶಿ ನಂಜುಂಡಯ್ಯ, ಪ್ರಾಂಶುಪಾಲೆ ತನುಜ, ಶಿಕ್ಷಕರುಗಳಾದ ಚಂದ್ರಶೇಖರ್, ಸಂಪತ್‍ಕುಮಾರ್, ಸಂಪ್ರೀತ್, ಸಿಬ್ಬಂದಿಗಳಾದ ಶ್ವೇತಾ, ಭಾಗ್ಯಜ್ಯೋತಿ, ಸುನಿತ, ಶಾಲಿನಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ವಿವಿಧ ಯೋಗ ಪ್ರಾಕಾರಗಳಲ್ಲಿ ಪಾಲ್ಗೊಂಡರು.

ಕಲ್ಲುಮಠದಲ್ಲಿ: ಕೊಡ್ಲಿಪೇಟೆ ಸಮೀಪದ ಕಲ್ಲುಮಠ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಮಠಾಧೀಶ್ವರರಾದ ಶ್ರೀ ಮಹಾಂತ ಸ್ವಾಮೀಜಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೈನಿಕ ಶಾಲೆಯಲ್ಲಿ ಯೋಗ ದಿನಾಚರಣೆ

ಕೂಡಿಗೆ: ಕೂಡಿಗೆಯ ಸೈನಿಕ ಶಾಲೆ ಕೊಡಗಿನಲ್ಲಿ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಕ್ಯಾಪ್ಟನ್ ಸುಮಿಷಾ ಶಂಕರ್ ಅವರು ಆಗಮಿಸಿದ್ದರು. ಜೂನ್ 21, 2015ರಂದು ವಿಶ್ವಸಂಸ್ಥೆಯು ಈ ದಿನವನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದಂದಿನಿಂದ ನಿರಂತರವಾಗಿ ಶಾಲೆಯಲ್ಲಿ ಪ್ರಸ್ತುತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗವು ಒಂದು ಪುರಾತನವಾದ ಶಿಸ್ತುಬದ್ಧ ವ್ಯವಸ್ಥೆಯಾಗಿದ್ದು, ಇದು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಉಪಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಟಿ ಅವರು ಯೋಗದ ಮಹತ್ವವನ್ನು ಕುರಿತು ಮಾತನಾಡಿದರು.

ನಂತರ ಪ್ರಧಾನಿಯಾದ ನರೇಂದ್ರ ಮೋದಿ ಅವರ ಯೋಗ ಕುರಿತಾದ ಸಂದೇಶವನ್ನು ಬಿತ್ತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಯೋಗದ ಮಹತ್ವದ ಕುರಿತು ಮಾತನಾಡುತ್ತಾ ಯೋಗ ಒಂದು ವೈಜ್ಞಾನಿಕ ಕಲೆಯಾಗಿದ್ದು, ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಪೂರಕವಾದ ವಾತಾವರಣವನ್ನು ಆತನ ಮನಸ್ಸು ಮತ್ತು ದೇಹದಲ್ಲಿ ನಿರ್ಮಿಸುತ್ತದೆ. ವ್ಯಕ್ತಿ ತನ್ನ ವ್ಯಕ್ತಿತ್ವ ವಿಕಸನದಲ್ಲಿ ಯೋಗವು ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈನಂದಿನ ಬದುಕಿನಲ್ಲಿ ಯೋಗವನ್ನು ಆಚರಿಸಲು ಕರೆ ನೀಡಿದರು. ಈ 4ನೇ ಅಂತರಾಷ್ಟ್ರೀಯ ಯೋಗದ ಘೋಷ ವಾಕ್ಯವಾದ ‘ಶಾಂತಿಗಾಗಿ ಯೋಗ’ವನ್ನು ಪ್ರಚುರ ಪಡಿಸಲಾಯಿತು. ಕೇಂದ್ರ ಸರ್ಕಾರದ ಆಯುಷ್ ಇಲಾಖೆಯಿಂದ ನಿಗದಿಪಡಿಸಿದ ಯೋಗದ ನಿರ್ದಿಷ್ಟ ಮಾರ್ಗದರ್ಶಿಯನ್ನು ಆಧರಿಸಿ ಯೋಗ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ನಂತರ ಮುಖ್ಯ ಅತಿಥಿಗಳು ತಮ್ಮ ಯೋಗ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವದರ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಅದರಲ್ಲಿ ತೊಡಗಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ವಿವಿಧ ಆಸನಗಳ ಪ್ರದರ್ಶನ, ಧ್ಯಾನ ಮತ್ತು ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದ್ದಿತು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು, ಶಾಲೆಯ 700 ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವಿಬಿನ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರೆ, ಶಾಲಾ ವಿದ್ಯಾರ್ಥಿಗಳ ನಾಯಕನಾದ ಕೆಡೆಟ್ ಶಯನ್ ಸೋಮಣ್ಣ ವಂದಿಸಿದರು.