ಮಡಿಕೇರಿ, ಜೂ. 21: ಕೇಂದ್ರ ಕೃಷಿ ಮತ್ತು ರೈತ ಕ್ಷೇಮ ಸಚಿವಾಲಯ ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ದ್ವಿತೀಯ ವರ್ಷಕ್ಕೂ (2018-19) ವಿಸ್ತರಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ತಿಳಿಸಿದ್ದಾರೆ.

ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮತ್ತು ಅದಕ್ಕೆ ಸಂಬಂಧಿಸಿದ ಪ್ರೋತ್ಸಾಹ ಧನವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯ ಪ್ರಯೋಜನವನ್ನು ಹೈನುಗಾರಿಕಾ ರೈತರ, ಮಹಿಳಾ ಸ್ವ-ಸಹಾಯ ಸಂಘ, ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಘಟನೆಗಳಿಗೆ ಆದ್ಯತೆಯಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ, ಭೂರಹಿತ, ಸಣ್ಣ ಮತ್ತು ಮಧ್ಯಮ ರೈತರ ಬಡತನ ರೇಖೆಯ ಕೆಳಗಿರುವ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶದ ಫಲಾನುಭವಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯಡಿಯಲ್ಲಿ ಶೇ. 25 ಪ್ರೋತ್ಸಾಹ ಧನ ಸಾಮಾನ್ಯ ವರ್ಗದವರಿಗೆ ಲಭ್ಯವಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ. 33.33 ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ರೂ. 323 ಕೋಟಿ ರೂಪಾಯಿಗಳನ್ನು ಈ ಯೋಜನೆಯ ಅನುಷ್ಠಾನಕ್ಕಾಗಿ ಕಾಯ್ದಿರಿಸಿದ್ದು, ಕರ್ನಾಟಕ ರಾಜ್ಯಕ್ಕೆ ರೂ. 12.46 ಕೋಟಿ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹ ಧನವನ್ನು ಆಧ್ಯತೆಯ ಮೇಲೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಕನಿಷ್ಟ 2 ರಿಂದ 10 ಹಸುಗಳ ಹೈನುಗಾರಿಕಾ ಘಟಕ, ಗರಿಷ್ಠ 20 ಗುಣಮಟ್ಟದ ಕರುಗಳ ಸಾಕಾಣೆ, ಎರೆಹುಳ ಗೊಬ್ಬರದ ಉತ್ಪಾದನಾ ಘಟಕ, ಹಸು ಸಾಕಾಣೆಯ ಜೊತೆಯಲ್ಲಿ, ಹಾಲಿನ ಉಪಕರಣಗಳ ಖರೀದಿ ಮತ್ತು ಶಿಥಲೀಕರಣ ಘಟಕದ ಸ್ಥಾಪನೆ, ಹಾಲು ಸಂರಕ್ಷಣಾ ಘಟಕ ಮತ್ತು ಉಪಕರಣಗಳ ಖರೀದಿ, ಹಾಲು ಮತ್ತು ಅದರ ಉತ್ಪನ್ನಗಳ ಸಾಗಾಟ ವ್ಯವಸ್ಥೆ, ಶೈತ್ಯಾಗಾರದ ವ್ಯವಸ್ಥೆ, ಪಶು ಚಿಕಿತ್ಸಾಲಯದ ಘಟಕದ ಸ್ಥಾಪನೆ, ಡೈರಿ ಉತ್ಪನ್ನಗಳ ಮಾರಾಟ ಕೇಂದ್ರದ ಸ್ಥಾಪನೆ ಮತ್ತಿತರವನ್ನು ನಿರ್ವಹಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ಸಿದ್ಧಪಡಿಸಿರುವ ಪ್ರದೇಶವಾರು ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆಯೂ ಕೂಡ ಒಂದಾಗಿದ್ದು, ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಮತ್ತು ಸಂಬಂಧಿತ ಇಲಾಖೆಗಳಿಗೆ ಈಗಾಗಲೇ ತಿಳಿಸಲಾಗಿದೆ.

ಜಿಲ್ಲೆಯ ಇಚ್ಚಿತ ರೈತರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ರೈತ ಉತ್ಪಾದಕ ಸಂಸ್ಥೆಗಳು ಯೋಜನೆಯ ಸಂಪೂರ್ಣ ಪ್ರಯೋಜನೆ ಪಡೆದು, ಕೊಡಗು ಜಿಲ್ಲೆಯಲ್ಲಿ ಕ್ಷೀರ ಉತ್ಪಾದನ ಕ್ರಾಂತಿ ಮಾಡಿ, ರೈತರ ಆದಾಯವನ್ನು ಮುಂದಿನ 2022 ರಲ್ಲಿ ದ್ವಿಗುಣಗೊಳಿಸುವ ನಿಟ್ಟಿನಲಿ,್ಲ ಈ ಅವಕಾಶ ಬಳಸಿಕೊಳ್ಳುವಂತೆ ಅವರು ಕೋರಿದ್ದಾರೆ.