ಮಡಿಕೇರಿ, ಜೂ. 21: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರಕಾರಿ ಶಾಲೆಗಳು ಶೇ. 100 ರಷ್ಟು ಫಲಿತಾಂಶ ನೀಡುವ ಮೂಲಕ ಸ್ಪರ್ಧೆಯೊಡ್ಡುತ್ತಿರುವದು ಶ್ಲಾಘನೀಯವೆಂದು ಅತ್ತೂರಿನ ಜ್ಞಾನಗಂಗಾ ಶಾಲೆಯ ಧರ್ಮದರ್ಶಿಗಳೂ ಹಾಗೂ ಲೆಕ್ಕಪರಿಶೋದಕ ಟಿ.ಕೆ. ಸುಧೀರ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶಗಳಿಸಿದ ಗಾಳಿಬೀಡಿನ ಸರಕಾರಿ ಪ್ರೌಢಶಾಲೆಯ ಸಾಧನೆಗೆ ಕಾರಣಕರ್ತರಾದ ಶಿಕ್ಷಕ ವೃಂದವನ್ನು ಸನ್ಮಾನಿಸುವ ಕಾರ್ಯಕ್ರಮ ಎಸ್.ಎನ್.ಡಿ.ಪಿ. ಮಡಿಕೇರಿ ತಾಲೂಕು ಘಟಕದ ವತಿಯಿಂದ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಕೆ. ಸುಧೀರ್, ಶೈಕ್ಷಣಿಕ ಸಾಧನೆಗೆ ಪರಿಶ್ರಮ ಮುಖ್ಯವೆಂದರು. ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ದ.ಸಂ.ಸ.ಯು ಕಳೆದ ಅನೇಕ ವರ್ಷಗಳಿಂದ ಶಿಕ್ಷಕರನ್ನು ಸನ್ಮಾನಿಸುತ್ತಾ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು. ಅತಿಥಿಗಳು ಶಿಕ್ಷಕ ವೃಂದವನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಎಸ್.ಎನ್.ಡಿ.ಪಿ. ಉಪಾಧ್ಯಕ್ಷ ಮಾದವನ್, ಕಾರ್ಯದರ್ಶಿ ಸುಜಾತ, ಶಿವರಾಮ ಮತ್ತಿತರರು ಪಾಲ್ಗೊಂಡಿದ್ದರು. ಎಸ್.ಎನ್.ಡಿ.ಪಿ. ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ವಾಸುದೇವ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.