ನಾಪೋಕ್ಲು, ಜೂ. 22: ಕೊಡಗು ಜಿಲ್ಲೆಯಲ್ಲಿ ಒಂದಲ್ಲಾ ಒಂದು ರೀತಿಯಿಂದ ಕಾಡಾನೆಗಳಿಂದ ಹಾನಿ ಸಂಭವಿಸುತ್ತಿರುವ ಬೆನ್ನಲ್ಲೇ ಇದೀಗ ಹೊಸತೊಂದು ಆತಂಕ ಸೃಷ್ಟಿಯಾಗಿದೆ. ಕೃಷಿ ಫಸಲು ನಾಶ, ಮನುಷ್ಯನ ಮೇಲೆ ಧಾಳಿ ನಡೆಸುತ್ತಿದ್ದ ಆನೆಗಳು ಇದೀಗ ಜಾನುವಾರು ಗಳನ್ನು ಬಲಿ ತೆಗೆದುಕೊಳ್ಳುವತ್ತ ಮುಂದಾಗಿರುವದು ಭೀತಿ ಮೂಡಿಸಿದೆ. ನಾಪೋಕ್ಲು ಸನಿಹದ ಚೇಲಾವರ ಗ್ರಾಮದಲ್ಲಿ ಆನೆ ತುಳಿತಕ್ಕೆ ಎತ್ತೊಂದು ಬಲಿಯಾಗಿರುವ ಘಟನೆ ವರದಿಯಾಗಿದೆ.

ಮನೆ ಸಮೀಪದ ಕೊಟ್ಟಿಗೆಯಲ್ಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಆನೆ ತುಳಿದು ಕೊಂದು ಹಾಕಿರುವ ಘಟನೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಟ್ಟಚೆರುವಂಡ ಚಿಟ್ಟಿಯಪ್ಪ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಎತ್ತನ್ನು ರಾತ್ರಿ ಕಟ್ಟಿ ಹಾಕಿದ್ದರು. ರಾತ್ರಿ ಅಲ್ಲಿಗೆ ಆಗಮಿಸಿದ ಕಾಡಾನೆಗಳು ಎತ್ತನ್ನು ತುಳಿದು ಕೊಂದು ಹಾಕಿದೆ.ರಾತ್ರಿ ಮೂರು ಗಂಟೆಯ ವೇಳೆಗೆ ಒಂದು ಮರಿಯಾನೆ ಸೇರಿದಂತೆ ಎರಡು ಕಾಡಾನೆಗಳು ಅನತಿದೂರದವರೆಗೆ ಎಳೆದುಕೊಂಡು ಹೋಗಿ ತುಳಿದು ಸಾಯಿಸಿವೆ. ಸುತ್ತಮುತ್ತಲಿನ ಕಾಫಿ ಗಿಡಗಳು ನಾಶವಾಗಿದ್ದು, ಈ ಬಗ್ಗೆ ಈ ವ್ಯಾಪ್ತಿಯ ಗ್ರಾಮಸ್ಥರು

(ಮೊದಲ ಪುಟದಿಂದ) ಹೆಚ್ಚಿನ ಆತಂಕ್ಕೆ ಒಳಗಾಗಿದ್ದಾರೆ. ನಷ್ಟಕ್ಕೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಕಾಡಾನೆಗಳು ಹಗಲು ರಾತ್ರಿ ಎನ್ನದೆ ಓಡಾಡುತ್ತಿದ್ದು ಗ್ರಾಮಸ್ಥರು ಭಯದಿಂದ ಜೀವಿಸುವಂತಾಗಿದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.