ಗೋಣಿಕೊಪ್ಪಲು, ಜೂ. 23: ಈ ಬಾರಿ ಜೂನ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಯು ತೀವ್ರ ಪ್ರಮಾಣದಲ್ಲಿ ಹಾಳಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ನಡೆದಾಡುವದೇ ಕಷ್ಟವಾಗಿದೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಕೊಪ್ಪ - ಪೊನ್ನಂಪೇಟೆ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಭಾರೀ ಗಾತ್ರದಲ್ಲಿ ರಸ್ತೆ ಗುಂಡಿ ಬಿದ್ದಿದೆ. ಕೇರಳ ಭಾಗಕ್ಕೆ ತೆರಳಬೇಕಾದ ವಾಹನಗಳು ಮಾಕುಟ್ಟ ಬಳಿ ರಸ್ತೆ ದುರಸ್ತಿ ಇರುವದರಿಂದ ಈ ಭಾಗದಲ್ಲಿ ಭಾರೀ ವಾಹನಗಳು ಹಾಗೂ ಲಘು ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಸಂಚರಿಸುತ್ತಿವೆ. ಇದರಿಂದ ಭಾರೀ ಗುಂಡಿಗಳಾಗುತ್ತಿವೆ.

ಪಂಚಾಯಿತಿ ವ್ಯಾಪ್ತಿಯ 6ನೇ ವಿಭಾಗದ ಕಾವೇರಿ ಹಿಲ್ಸ್ ಬಡಾವಣೆಯ ಸಂಪರ್ಕ ರಸ್ತೆಯು ಗುಂಡಿ ಬಿದ್ದಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಈ ಭಾಗಕ್ಕೆ ಆಟೋ ರಿಕ್ಷಾಗಳು ಆಗಮಿಸುತ್ತಿಲ್ಲ. ಮಳೆ ಮುಂದುವರಿದರೆ ಬಡಾವಣೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆಯಲ್ಲಿ ವಿದ್ಯಾರ್ಥಿಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಗೋಣಿಕೊಪ್ಪ, ಮೈಸೂರು ರಸ್ತೆಯ ಕೆಲವು ಭಾಗಗಳಲ್ಲಿ ಗುಂಡಿಗಳು ಕಂಡು ಬಂದಿವೆ. ವಿಪರೀತ ಮಳೆಯಿಂದ ರಸ್ತೆ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯ 3ನೇ ವಿಭಾಗದ ಕೀರೆ ಹೊಳೆ ಸೇತುವೆಯ ಮೇಲ್ಭಾಗದಲ್ಲಿ ಹಾಕಿದ್ದ ಕಾಂಕ್ರೀಟ್ ಕಿತ್ತು ಬಂದಿದ್ದು, ಭಾರೀ ಗಾತ್ರದ ಗುಂಡಿ ಬಿದ್ದಿದೆ. ಈ ಭಾಗದಲ್ಲಿ ವಾಹನ ಸಂಚಾರ ಕಷ್ಟವಾಗಿದೆ.

ಜಿಲ್ಲೆಗೆ ಕಂದಾಯ ಸಚಿವ ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಈಗಾಗಲೇ ಮಾಕುಟ್ಟ ಭಾಗದ ರಸ್ತೆ ಹಾಗೂ ತಿತಿಮತಿ ಭಾಗದ ರಸ್ತೆಗಳನ್ನು ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ತೆರಳಿದ್ದಾರೆ. -ಹೆಚ್.ಕೆ. ಜಗದೀಶ್