ಮಡಿಕೇರಿ, ಜೂ.22 : ಸರಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಣ ಹಾಗೂ ಶಿಕ್ಷಕರ ಲಭ್ಯತೆಯೂ ಇರುವದರಿಂದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಕಿವಿಮಾತು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಮಡಿಕೇರಿ ನಗರದ ನಗರಸಭಾ ಶಾಲಾ(ಎವಿ ಸ್ಕೂಲ್) ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಚಿದ್ವಿಲಾಸ್; ನಗರಸಭೆಗೆ ಒಳಪಡುವ ಸರಕಾರಿ ಶಾಲೆಯ ಶಿಕ್ಷಕರುಗಳಿಗೆ ಸೇವೆಗೆ ತಕ್ಕ ವೇತನ ಸಿಗದೆ ಇರುವದು ಅತ್ಯಂತ ವಿಷಾದಕರವೆಂದರು. ನಮ್ಮ ಹಕ್ಕನ್ನು ಸರಕಾರದ ಮೂಲಕ ಪಡೆಯುವದಕ್ಕಾಗಿ ಸಂಘರ್ಷದ ಹಾದಿ ತುಳಿಯಬೇಕಾದ ಪರಿಸ್ಥಿತಿ ಎದುರಾಗಿರುವದು ದುರಂತವೆಂದರು.
ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಮಹತ್ತರ ಜವಬ್ದಾರಿಯನ್ನು ನಿರ್ವಹಿಸುವ ಶಿಕ್ಷಕರನ್ನು ಗೌರವಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಿ, ಗೌರವಿಸುತ್ತಿರುವದು ಶ್ಲಾಘನೀಯವೆಂದು ಚಿದ್ವಿಲಾಸ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ದಾನಿ ಹಾಗೂ ಬೆಳೆಗಾರ ವಾಸುದೇವ್, ಇಂದು ಸರಕಾರಿ ಶಾಲೆಗಳೆಂದರೆ ಬಡವರ ಶಾಲೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ, ಆದರೆ ಸರಕಾರಿ ಶಾಲೆಗಳಲ್ಲೂ ಶ್ರೀಮಂತ ಶಿಕ್ಷಣ ಸಿಗುತ್ತದೆ ಎನ್ನುವದು ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶಗಳಿಂದ ಸಾಬೀತಾಗಿದೆ ಎಂದರು.
ಸರಕಾರಿ ಶಾಲೆಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಗಳಿಸುತ್ತಿದ್ದು, ಇದಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ನಮ್ಮ ಸಂಘಟನೆ ಶೈಕ್ಷಣಿಕ ಪ್ರಗತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿದೆ ಎಂದರು. ಯಾವ ವಿದ್ಯಾರ್ಥಿಗಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದ ಅವರು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕೂಡ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದ್ದು, ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕೆಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕನ್ನಂಡ ಸಂಪತ್ ಅವರು ವಿದ್ಯಾರ್ಥಿಗಳು ಯಾವದೇ ಕಾರಣಕ್ಕೂ ಜಾತಿ, ಧರ್ಮಗಳ ಬಗ್ಗೆ ಚಿಂತಿಸದೆ ಭಾರತಾಂಬೆಯ ಮಕ್ಕಳಂತೆ ಬದುಕಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಎ.ಪಿ.ದೀಪಕ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಪುಲ್ಲ ದೇವರಾಜ್, ಎಸ್‍ಡಿಪಿಐ ನಗರಾಧ್ಯಕ್ಷ ಖಲೀಲ್, ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಪ್ರದೀಪ್ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅತಿಥಿಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿ ಶೈಕ್ಷಣಿಕ ಸ್ಫೂರ್ತಿ ತುಂಬಿದರು. ಶಿಕ್ಷಕ ಕೇಶವ್ ಸ್ವಾಗತ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಪುಲ್ಲ ಅವರಿಂದ ವಂದನಾರ್ಪಣೆ ಕೋರಲಾಯಿತು.