ಸೋಮವಾರಪೇಟೆ, ಜೂ. 23: ಸಮೀಪದ ಅರಿಶಿನಗುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥಸ್ವಾಮಿ ಹಾಗೂ ನಾಗದೇವರ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಂಗಳೂರಿನ ಕದ್ರಿಯ ಶ್ರೀಮಂಜುನಾಥೇಶ್ವರ ದೇವಾಲಯದ ತಂತ್ರಿಗಳಾದ ವಿಠಲದಾಸ್ ಅವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಶುದ್ಧಿ ಕಲಶ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ತಂಬಿಲ ಪೂಜೆ, ಗಣಪತಿಹೋಮ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ನಾಗನಿಗೆ ವಿಶೇಷವಾಗಿ ಆಶ್ಲೇಷಬಲಿ ಪೂಜೆ ಹಾಗೂ ಮಂಜುನಾಥನಿಗೆ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ವಾರ್ಷಿಕೋತ್ಸವದ ನೇತೃತ್ವವನ್ನು ದೇವಾಲಯದ ಮುಖ್ಯಸ್ಥರಾದ ರಾಜೇಶ್ನಾಥ್ ಗುರೂಜಿ, ಶ್ರೀ ಮಂಜುನಾಥ ದೇವಾಲಯ ಸಮಿತಿ, ಉತ್ಸವ ಸಮಿತಿ ಹಾಗೂ ಗಣಪತಿ ಸೇವಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ವಹಿಸಿಕೊಂಡಿದ್ದರು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ಜಗದೀಶ್ ಉಡುಪ ಮತ್ತಿತರರು ನೆರವೇರಿಸಿದರು.