ವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗದಲ್ಲಿ ಇಪ್ಪತ್ತು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅರಸುನಗರ, ಮಲೆತಿರಿಕೆ ಬೆಟ್ಟ ಹಾಗೂ ನೆಹರೂ ನಗರ ಪ್ರದೇಶಗಳಲ್ಲಿ ಮಳೆಗೆ ಮುನ್ನ ತಾಲೂಕು ಆಡಳಿತ ಮುಂಜಾಗರೂಕತಾ ಕ್ರಮ ವಹಿಸಬೇಕು. ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಟುಂಬಗಳು ಭಾರೀ ಮಳೆಗೆ ಜನಜೀವನ ತತ್ತರಿಸುತ್ತಿದೆ. ಬಡ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಜನತಾದಳ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರಿಗೆ ವಿನಂತಿಸಿದರು.

ಅರಸುನಗರದಲ್ಲಿ ಭಾರೀ ಮಳೆಗೆ ನಿನ್ನೆ ದಿನ ಶಶಿಕಲಾ ಎಂಬವರ ಮನೆಯ ಮಧ್ಯದ ಗೋಡೆ ಕುಸಿತಗೊಂಡು ನೆಲಸಮಗೊಂಡ ಸ್ಥಳವನ್ನು ಪರಿಶೀಲಿಸಿದ ಸಂಕೇತ್ ಪೂವಯ್ಯ ಅವರು ಮಳೆಯಿಂದ ಬೀದಿಗೆ ಬಿದ್ದಿರುವ ಕುಟುಂಬಕ್ಕೆ ತುರ್ತು ಪರಿಹಾರ ಒದಗಿಸಬೇಕು. ಮನೆಯ ಇತರ ಎಲ್ಲ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯದ ಅಂಚಿನಲ್ಲಿದೆ. ತಾಲೂಕು ಆಡಳಿತದ ಅಧಿಕಾರಿಗಳು ಮನೆಯನ್ನು ಪರಿಶೀಲಿಸಿ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ದೂರವಾಣಿ ಮೂಲಕ ಸ್ಥಳದಿಂದಲೇ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು ಅವರು ಕಂದಾಯ ಸಿಬ್ಬಂದಿಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಮಹಜರು ನಡೆಸಿದರು. ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಮನೆ ಬಿದ್ದುದರಿಂದ ನಷ್ಟದ ಅಂದಾಜು ವೆಚ್ಚದ ಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗದೆ. ವರದಿಯ ನಂತರ ಪರಿಶೀಲನೆ ನಡೆಸಿ ತಕ್ಷಣ ಪರಿಹಾರ ಒದಗಿಸಲಾಗುವದು ಎಂದು ಸಂಕೇತ್ ಅವರ ಮನವಿಗೆ ಸ್ಪಂದಿಸಿದರು.

ಬೆಟ್ಟದ ತಪ್ಪಲಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಭಾರೀ ಮಳೆಯ ಮುಂಜಾಗರೂಕತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಸಂಕೇತ್ ಪೂವಯ್ಯ ಅವರ ಜೊತೆಯಲ್ಲಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಇತರ ಕಾರ್ಯಕರ್ತರು ಹಾಜರಿದ್ದರು.