ಸೋಮವಾರಪೇಟೆ, ಜೂ.22 : ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಮಲ್ಲಳ್ಳಿ ಜಲಪಾತದಲ್ಲಿ ಮೃತ್ಯು ಸಂಭವಿಸುತ್ತಲೇ ಇವೆ. ಜಲಪಾತಕ್ಕೆ ಇಳಿದರೆ ಅಪಾಯ ತಪ್ಪಿದ್ದಲ್ಲ ಎಂದು ಆಗಾಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಸಹ ಇದನ್ನೂ ಮೀರಿ ನೀರಿಗಿಳಿದು ಇಹಲೋಕ ತ್ಯಜಿಸುವವರ ಪಟ್ಟಿ ಬೆಳೆಯುತ್ತಲೇ ಇದೆ. ಭೋರ್ಗರೆ ಯುತ್ತಿರುವ ಮಲ್ಲಳ್ಳಿ ಜಲಪಾತಕ್ಕೆ ಇಂದು ಮತ್ತೊಂದು ಬಲಿಯಾಗಿದೆ. ಯುವಕನೋರ್ವ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಸಂಜೆ ಸಂಭವಿಸಿದೆ.
ತಾಲೂಕಿನ ಕುಶಾಲನಗರ ಸಮೀಪದ ಸುಂದರನಗರ ನಿವಾಸಿ, ನಾಗರಾಜು-ಪರಮೇಶ್ವರಿ ದಂಪತಿ ಪುತ್ರ ಮನೋಜ್ (24)ಎಂಬಾತನೇ ಸಾವನ್ನಪ್ಪಿದವ ನಾಗಿದ್ದು, ಮದುವೆಯ ಆರತಕ್ಷತೆಗೆ ಅಗಮಿಸಿದ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಕುಶಾಲನಗರದ ಕಾಫಿ ಕ್ಯೂರಿಂಗ್ ವಕ್ರ್ಸ್ ನಲ್ಲಿ ಕಾರ್ಮಿಕನಾಗಿದ್ದ ಮನೋಜ್ ತನ್ನ ಸ್ನೇಹಿತನ ಸಂಬಂಧಿಯ ಮದುವೆಗೆಂದು ಇಂದು ಬೆಳಿಗ್ಗೆ ಇತರ ಸ್ನೇಹಿತರೊಂದಿಗೆ ಶಾಂತಳ್ಳಿಗೆ ಆಗಮಿಸಿದ್ದಾನೆ. ಆರತಕ್ಷತೆ ಮುಗಿಸಿ ಮೂರು ಬೈಕಿನಲ್ಲಿ ಆರು ಮಂದಿ ಸ್ನೇಹಿತರು ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದು, ಸಂಜೆ 4.30ರ ಸಮಯದಲ್ಲಿ ಜಲಪಾತದ ತಳಭಾಗ ತಲಪಿದ್ದಾರೆ. ಈ ಸಂದರ್ಭ ಮನೋಜ್ ಜಲಪಾತದ ಹರಿವ ನೀರಿನೊಳಗೆ ಕಾಲಿಟ್ಟ ಸಂದರ್ಭ ಜಾರಿ ನೀರಿನೊಳಗೆ ಬಿದ್ದಿದ್ದಾನೆ. ಜಲಪಾತದಲ್ಲಿ ನೀರಿನ ಸೆಳೆತ ಅಧಿಕವಿದ್ದುದರಿಂದ ಸ್ನೇಹಿತರು ನೋಡ ನೋಡುತ್ತಿದ್ದಂತೆ ನೀರೊಳಗೆ ಕಣ್ಮರೆಯಾಗಿದ್ದಾನೆ.
ತಕ್ಷಣ ಸ್ನೇಹಿತರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಂಜೆಗತ್ತಲು ಹಾಗೂ ಜಲಪಾತದಲ್ಲಿ ಅಧಿಕ
(ಮೊದಲ ಪುಟದಿಂದ) ನೀರಿನ ಹರಿವು, ದಟ್ಟ ಮಂಜು ಕವಿದಿದ್ದರಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಗಿಲ್ಲ. ತಾ.23 ರಂದು (ಇಂದು) ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಳ್ಳಿ ಜಲಪಾತ ಎಷ್ಟು ಮನಮೋಹಕವಾಗಿದೆಯೋ ನೀರಿಗಿಳಿದರೆ ಅಷ್ಟೇ ಅಪಾಯಕಾರಿ. ಈ ಬಗ್ಗೆ ಪ್ರವಾಸಿಗರು ಎಚ್ಚರ ವಹಿಸುವಂತೆ ಆಗಾಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಸಹ ಇಂತಹ ದುರ್ಘಟನೆಗಳು ಸಂಭವಿಸುತ್ತಿರುವದು ದುರಂತ. - ವಿಜಯ್