ಕೂಡಿಗೆ, ಜೂ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಗ್ರಾಮ ಪಂಚಾಯ್ತಿಯ ಜಮಾ ಖರ್ಚಿನ ಬಗ್ಗೆ ಚರ್ಚೆ ನಡೆಯಿತು.
ಮಾಂಸದ ಅಂಗಡಿಗಳನ್ನು ತೆರೆಯಲು ಪರವಾನಿಗೆ ನೀಡುವಂತೆ ಸದಸ್ಯ ಮಹೇಶ್ಕಾಳಪ್ಪ ಒತ್ತಾಯಿಸಿದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪರ-ವಿರೋಧ ಚರ್ಚೆಗಳು ನಡೆದವು. ನಂತರ ಗ್ರಾಮ ಪಂಚಾಯಿತಿಗೆ ಯಾವದೇ ರೀತಿಯಲ್ಲಿ ನಷ್ಟ ಆಗದ ರೀತಿ ಹಾಗೂ ಶುಚಿತ್ವವನ್ನು ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆಯೊಂದಿಗೆ ಮಾಂಸದಂಗಡಿಗಳಿಗೆ ಪರವಾನಿಗೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಇದೇ ಸಂದರ್ಭ 14ನೇ ಹಣಕಾಸಿನ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆದು, ಮುಂದಿನ ದಿನಗಳಲ್ಲಿ ಗ್ರಾಮ ಸಭೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಯಿಷ ಅವರು ಸರಕಾರದ ನಿಯಮ ಮತ್ತು ಆಡಳಿತ ಮಂಡಳಿಯ ತೀರ್ಮಾನದಂತೆ ಕಾರ್ಯನಿರ್ವಹಿಸಲು ಸದಸ್ಯರ ಸಹಕಾರ ಮುಖ್ಯ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ವಿ.ಸಣ್ಣಪ್ಪ ಹಾಗೂ ಸದಸ್ಯರು ಹಾಜರಿದ್ದರು.