ಮಡಿಕೇರಿ, ಜೂ. 22: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷ ಕೃಷಿ ಭೂಮಿ ಕಿರಿದಾಗುವದರೊಂದಿಗೆ, ಭತ್ತದ ಗದ್ದೆಗಳು ವಾಣಿಜ್ಯ ಸಂಕೀರ್ಣಗಳಾಗಿ ಮಾರ್ಪಾಡು ಗೊಂಡು, ಅಲ್ಲಲ್ಲಿ ವಸತಿ ಗೃಹಗಳು, ರೆಸಾರ್ಟ್‍ಗಳು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿರುವ ಚಿತ್ರಣ ಎದುರಾಗ ತೊಡಗಿವೆ. ಒಂದೊಮ್ಮೆ 40 ರಿಂದ 45 ಸಾವಿರ ಹೆಕ್ಟೇರ್ ವಿಸ್ತಾರವಿದ್ದ ಕೃಷಿ ಭೂಮಿ ಇಂದು ದಾಖಲೆಗಳಲ್ಲಿ ಕೇವಲ 35 ಸಾವಿರಕ್ಕೆ ತಲಪಿದೆ. ಹೀಗಿದ್ದೂ ನಿಜವಾಗಿ ಕೊಡಗಿನಲ್ಲಿ ಮುಂಗಾರು ಭತ್ತದ ಕೃಷಿ ಸರಾಸರಿ 22 ರಿಂದ 26 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತಗೊಂಡಿದೆ. ಬಯಲು ಸೀಮೆಯ ತಂಬಾಕು, ದ್ವಿದಳ ಧಾನ್ಯ, ಜೋಳ ಇತ್ಯಾದಿ ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಮುಂಗಾರುವಿನ ಭತ್ತ ಬೆಳೆ ಕೇವಲ 24 ಸಾವಿರ ಹೆಕ್ಟೇರ್‍ನಷ್ಟು ಗುರಿ ಹೊಂದಲಾಗಿದೆ.ಕಾರಣ ಒಂದೊಮ್ಮೆ ಕೊಡಗಿನ ಉದ್ದಗಲಕ್ಕೂ ಮುಂಗಾರುವಿನಲ್ಲಿ ಧಾರಾಕಾರ ಮಳೆಯೊಂದಿಗೆ, ವರ್ಷಪೂರ್ತಿ ಭತ್ತದ ಗದ್ದೆಗಳ ಸಹಿತ ಹೊಳೆ - ತೋಡುಗಳಲ್ಲಿ ಜಲಮೂಲ ಗೋಚರಿಸುತ್ತಿತ್ತು. ಅನೇಕ ಕಡೆಗಳಲ್ಲಿ ಮುಂಗಾರು ಬೆಳೆಯೊಂದಿಗೆ ಬೇಸಿಗೆಯಲ್ಲೂ ಭತ್ತ ಬೆಳೆಯುವ ಕಾಯಕದಲ್ಲಿ ಅನ್ನದಾತ ರೈತ ತೊಡಗಿಸಿಕೊಂಡಿದ್ದ.ಬದಲಾದ ಪರಿಸ್ಥಿತಿ : ಇಂದು ಕಾಲ ಬದಲಾಗಿದೆ. ಅನ್ನದಾತನ ಕೃಷಿ ಭೂಮಿಯು ಕಿರಿದಾಗಿವೆ. ಗದ್ದೆ ಉಳುಮೆಗೆ ಬಳಸುತ್ತಿದ್ದ ಗೋ ಸಂಪತ್ತು, ಎತ್ತುಗಳು, ಗೋಮಾಳ ಎಲ್ಲವೂ ಕಣ್ಮರೆಯಾಗುವಂತಾಗಿದೆ. ಪರಿಣಾಮ ಸಗಣಿ ಗೊಬ್ಬರ, ಭೂಮಿಯ ಫಲವತ್ತತೆ ಎಲ್ಲಾ ಮಾರ್ಪಾಡುಗೊಂಡು ರೈತ ಯಾಂತ್ರೀಕೃತ ಜೀವನೋಪಾಯ ಕಂಡು ಕೊಂಡಿದ್ದಾನೆ.
ಪ್ರಕೃತಿ ಅಸಮತೋಲನ : ಕಾಲಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಸಕಾಲದಲ್ಲಿ ಮಳೆಯಾಗದೆ, ಆಗೊಮ್ಮೆ, ಈಗೊಮ್ಮೆ ಎದುರಾಗುವ ಅಕಾಲಿಕ ಮಳೆಯ ತೀವ್ರತೆ ತಡೆಯಲಾರದೆ ಮನುಷ್ಯನೊಂದಿಗೆ
(ಮೊದಲ ಪುಟದಿಂದ) ಜೀವ ಸಂಕುಲ ಹೈರಾಣಾಗುವಂತೆ ಭಾಸವಾಗುತ್ತಿದ್ದು, ಇಲ್ಲಿ ವಾಸ್ತವದ ಮಳೆಗಾಲ ಅನುಭವಕ್ಕೆ ಬರುತ್ತಿಲ್ಲವಷ್ಟೆ.
ಪ್ರಸಕ್ತ ವಿಚಿತ್ರ : ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಕೊಡಗು ಜಿಲ್ಲೆಯಾದ್ಯಂತ ಸರಾಸರಿ 12 ರಿಂದ 15 ಇಂಚು ಮಳೆಯಾಗಿದ್ದರೆ, ಕೇವಲ ಜೂನ್ ಮಾಸದ 20 ದಿನಗಳಲ್ಲಿ 25 ರಿಂದ 30 ಇಂಚು ಮಳೆ ಸುರಿದಿರುವದು ಕಂಡು ಪರಿತಪಿಸುವಂತಾಗಿದೆ. ಆ ಬೆನ್ನಲ್ಲೇ ಮತ್ತೆ ಮುಂಗಾರು ಕ್ಷೀಣಗೊಳ್ಳುವ ಅನುಭವವಾಗತೊಡಗಿದೆ. ಪ್ರಸಕ್ತ ಅಂಕಿ ಅಂಶಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಸರಾಸರಿ 45.46 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 19.52 ಇಂಚು ಮಳೆಯಾಗಿತ್ತು. ಇಲ್ಲಿ ಈ ಸಾಲಿನ ಮಳೆಯ ಪ್ರಮಾಣದಲ್ಲಿ 25.94 ಇಂಚು ಅಧಿಕ ದಾಖಲಾಗಿದೆ. ಅಲ್ಲದೆ ಅಧಿಕಗೊಂಡಿರುವ ಮಳೆ ಕೇವಲ ಜೂನ್ ಮಾಸದ ಹತ್ತಾರು ದಿನಗಳಲ್ಲೇ ಸುರಿದಿದೆ.
ಮಡಿಕೇರಿಗೆ ಮಳೆ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಪ್ರಸಕ್ತ ವರ್ಷಾರಂಭದಿಂದ ಮೇ ಅಂತ್ಯಕ್ಕೆ ಕೇವಲ 26.15 ಇಂಚು ಮಳೆಯಾದರೆ, ಕೇವಲ ಜೂನ್‍ನಲ್ಲಿಯೇ ಇದುವರೆಗೆ 30.50 ಇಂಚು ದಾಖಲೆಯ ಮಳೆ ಸುರಿದಿದೆ. ಹೀಗೆ ಇದುವರೆಗೆ ಒಟ್ಟು 56.65 ಇಂಚು ಮಳೆಯಾಗಿದೆ. ಕಳೆದ ವರ್ಷ ಮಡಿಕೇರಿಯಲ್ಲಿ ಜೂನ್ ಅಂತ್ಯಕ್ಕೆ ದಾಖಲಾಗಿದ್ದ ಮಳೆ 18.50 ಇಂಚು ಮಾತ್ರ ಕಂಡು ಬಂದಿದೆ.
ತಾಲೂಕುವಾರು ಮಳೆ : ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 0.31 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ 60.54 ಇಂಚು ದಾಖಲಾಗಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 25.30 ಇಂಚು ಮಳೆಯಾಗಿತ್ತು. ಪ್ರಸಕ್ತ ಇಲ್ಲಿ 35.24 ಇಂಚು ಅಧಿಕ ಮಳೆ ಗೋಚರಿಸಿದೆ.
ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 32.39 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 15.37 ಇಂಚು ಮಳೆಯಾಗಿದ್ದು, ಪ್ರಸಕ್ತ ಅವಧಿಗೆ 17.02 ಇಂಚು ಅಧಿಕ ಮಳೆ ದಾಖಲಾಗಿದೆ. ಈ ತಾಲೂಕಿನ ಶಾಂತಳ್ಳಿ ಸುತ್ತಮುತ್ತ ಭಾರೀ ಮಳೆಯೊಂದಿಗೆ ಕಳೆದ ವರ್ಷಕ್ಕಿಂತಲೂ, ಜೂನ್‍ನಲ್ಲಿಯೇ ಸುಮಾರು 38 ಇಂಚು ಅಧಿಕ ದಾಖಲಾಗಿದೆ.
ವೀರಾಜಪೇಟೆ : ಈ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಇಂದಿನ ತನಕ 43.46 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 17.89 ಇಂಚು ಮಳೆಯೊಂದಿಗೆ ಪ್ರಸಕ್ತ ಸಾಲಿನಲ್ಲಿ 25.57 ಇಂಚು ಹೆಚ್ಚಿನ ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ಹುದಿಕೇರಿ, ಶ್ರೀಮಂಗಲ, ಕುಟ್ಟ, ಮಾಕುಟ್ಟ ವ್ಯಾಪ್ತಿಯಲ್ಲಿ ಪ್ರಸಕ್ತ ಜೂನ್ ಮಾಸದ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದನ್ನು ಸ್ಮರಿಸಬಹುದು.
ಕೃಷಿ ಇಲಾಖೆ ಅನಾಥ : ಕೊಡಗು ಜಿಲ್ಲೆಯಲ್ಲಿ ಮುಂಗಾರುವಿನ ಹಂಗಾಮು ಸುರುವಾಗಿದ್ದರೂ, ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆ ಸೇರಿದಂತೆ ಸುಮಾರು ಒಂದುನೂರು ಹುದ್ದೆಗಳು ಖಾಲಿಯಿದ್ದು, ಅನ್ನದಾತ ರೈತನನ್ನು ಕೇಳುವವರಿಲ್ಲದಂತಾಗಿದೆ. ಈ ಇಲಾಖೆಯಲ್ಲಿ ಸರಕಾರದಿಂದ ಮಂಜೂರಾಗಿರುವ 145 ಹುದ್ದೆಗಳಲ್ಲಿ 100 ಖಾಲಿಯಿದ್ದು, ಇಡೀ ಜಿಲ್ಲೆಯಲ್ಲಿ 45 ಮಂದಿ ಕಾರ್ಯನಿರ್ವಹಿಸುವಂತಾಗಿದೆ.