ಸೋಮವಾರಪೇಟೆ, ಜೂ. 23: ಕಳೆದ ಮೇ 31 ರಂದು ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಐಗೂರಿನ ಆಟೋ ಚಾಲಕ ಗಣೇಶ್ ಅವರ ಕುಟುಂಬಕ್ಕೆ ಸೋಮವಾರಪೇಟೆ ನ್ಯಾಯಾಲಯದ ನಿವೃತ್ತ ನೌಕರ, ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರು 5 ಸಾವಿರ ಧನ ಸಹಾಯ ನೀಡಿದರು. ‘ಶಕ್ತಿ’ಯಲ್ಲಿನ ವರದಿ ಗಮನಿಸಿದ ಜಯಪ್ರಕಾಶ್ ಅವರು ಮೃತ ಗಣೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರಲ್ಲದೇ ತಮ್ಮ ಮಾಸಿಕ ಪಿಂಚಣಿಯಿಂದ ಬಂದ ಹಣದಲ್ಲಿ ರೂ. 5 ಸಾವಿರವನ್ನು ಧನ ಸಹಾಯ ನೀಡಿದರು. ಪತ್ರಿಕೆಯೊಂದಿಗೆ ಮಾತನಾಡಿದ ಜಯಪ್ರಕಾಶ್, ‘ಗಣೇಶ್ ಅವರ ಸಾವಿನ ನಂತರ ಕುಟುಂಬದ ಸ್ಥಿತಿಯನ್ನು ಹೊರಜಗತ್ತಿಗೆ ತೋರ್ಪಡಿಸುವ ಮೂಲಕ ‘ಶಕ್ತಿ’ ನೊಂದವರ ಕಣ್ಣೀರೊರೆಸಲು ಮುಂದಾಗಿದ್ದು ಶ್ಲಾಘನೀಯ. ಗಣೇಶ್ ಅವರ ಈರ್ವರು ಅಂಗವೈಕಲ್ಯ ಮಕ್ಕಳ ಸ್ಥಿತಿಗೆ ಮರುಗದವರೇ ಇಲ್ಲ. ಸಹೃದಯರು ಇನ್ನಷ್ಟು ಸ್ಪಂದಿಸುವಂತಾಗಬೇಕು’ ಎಂದರು.