ವೀರಾಜಪೇಟೆ, ಜೂ. 22: ರಾಜ್ಯದ ಇತರ ಪಂಚಾಯಿತಿಗಳಿಗೆ ಹೋಲಿಕೆ ಮಾಡಿದರೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾದರಿ ಪಂಚಾಯಿತಿಯಾಗಲಿದೆ ಎಂದು ವೀರಾಜಪೇಟೆ ಶಾಸಕೆ ಕೆ.ಜಿ ಬೋಪಯ್ಯ ಹೇಳಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಭಾಗವಹಿಸಿ ಸದಸ್ಯರು ಹಾಗೂ ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅಭಿವೃದ್ದಿ ಕಾರ್ಯದಲ್ಲಿ ಯಾವದೇ ತಾರತಮ್ಯವಿಲ್ಲ, ರಾಜಕೀಯ ರಹಿತವಾಗಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಚರ್ಚೆ ನಡೆಸಿ ಅಭಿವೃದ್ಧಿಗೆ ಒತ್ತು ನೀಡಲಾಗುವದು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಒಮ್ಮತದಿಂದ ಅಭಿವೃದ್ಧಿ ಪ್ರಗತಿಯತ್ತ ಸಾಗುತ್ತಿರುವದು ಶ್ಲಾಘನೀಯ. ಎಲ್ಲಾ ಸದಸ್ಯರ ರಾಜಕೀಯ ರಹಿತವಾದ ಮನೋಭಾವನೆಗಳು ಇತರರಿಗೆ ಅನುಕರಣೀಯವಾಗಲಿದೆ. ನನ್ನ ಅಧಿಕಾರದ ಅವಧಿಯಲ್ಲಿ ಪಂಚಾಯಿತಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವದು. ಈ ಪಟ್ಟಣ ಪಂಚಾಯಿತಿಯು ಪಟ್ಟಿಯಲ್ಲಿದ್ದು ಪ್ರಶಸ್ತಿ ಲಭಿಸಲು ಎಲ್ಲ್ಲಾ ರೀತಿಯ ಪ್ರಯತ್ನ ನಡೆಸಲಾಗುವದು ಎಂದು ಹೇಳಿದರು.