ಗೋಣಿಕೊಪ್ಪ ವರದಿ, ಜೂ. 23: ಸರ್ಕಾರ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಕಾರ್ಯಕ್ರಮಗಳು ಸೌಲಭ್ಯಗಳ ಕೊರತೆಯಿಂದ ಕಾರ್ಯ ರೂಪಕ್ಕೆ ಬರಲು ತೊಂದರೆಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಗೋಣಿಕೊಪ್ಪ ಅನುದಾನಿತ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಮಡಿಕೇರಿ ರೋಟರಿ ಮಿಸ್ಟ್ರಿಹಿಲ್ಸ್, ರೋಟರಿ ಫೌಂಡೇಷನ್, ರೋಟರಿ ಗೋಣಿಕೊಪ್ಪ ಹಾಗೂ ವೀರಾಜಪೇಟೆ ರೋಟರಿ ಸಹಯೋಗದಲ್ಲಿ ಸ್ಥಾಪಿಸಿರುವ ವಿಜ್ಞಾನ ವಾಹಿನಿ ಸಂಚಾರಿ ಪ್ರಯೋಗ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅರಳಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನ ಹಾಗೂ ಗಣಿತ ಪ್ರಯೋಗಶಾಲೆಯ ಪ್ರಯೋಜನಗಳನ್ನು ಬಳಸಿಕೊಳ್ಳುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಜ್ಞಾನ ವಾಹಿನಿ ಸಂಯೋಜಕ ಡಾ. ನರಸಿಂಹನ್ ಮಾತನಾಡಿ, ಜಿಲ್ಲೆಯಲ್ಲಿ 3 ಸಂಚಾರಿ ವಿಜ್ಞಾನ ಪ್ರಯೋಗಾಲಯ ಹಾಗೂ 3 ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ 5 ಬಾರಿ ಕೊಡಗಿನ 102 ಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಪ್ರಯೋಗಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಚಾಲಕ ಡಾ.ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಪ್ರಯೋಗಶಾಲೆ ಹಾಗೂ ಗ್ರಂಥಾಲಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ವಿದ್ಯಾರ್ಥಿ ಏಳಿಗೆಗಾಗಿ ಶ್ರಮಿಸುತ್ತಿರುವ ರೋಟರಿ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ರೋಟರಿ ಗೋಣಿಕೊಪ್ಪ ಅಧ್ಯಕ್ಷ ಮಚ್ಚಮಾಡ ವಿಜಯ್, ಶಾಲಾ ಮಂಡಳಿ ಕಾರ್ಯದರ್ಶಿ ಕುಪ್ಪಂಡ ತಿಮ್ಮಯ್ಯ, ವಿಜ್ಞಾನ ವಾಹಿನಿ ಶಿಕ್ಷಕ ಕಾರ್ತಿಕ್, ವೀರಾಜಪೇಟೆ ರೋಟರಿ ಅಧ್ಯಕ್ಷ ಶಾಂತಾರಾಮ್ ಕಾಮತ್ ಹಾಗೂ ಮುಖ್ಯ ಶಿಕ್ಷಕ ರತೀಶ್ ರೈ ಇದ್ದರು.