ಗುಡ್ಡೆಹೊಸೂರು, ಜೂ. 22: ಇಲ್ಲಿನ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು ವೃತ್ತದ ಬಳಿ ವಿದ್ಯುತ್ ತಂತಿಯಿಂದ ಸುಮಾರು ಒಂದು ತಿಂಗಳಿನಿಂದ ಪ್ರತಿನಿತ್ಯ ವಿವಿಧ ಪಕ್ಷಿಗಳು ಮರಣಹೊಂದುತ್ತಿದ್ದವು. ಅಲ್ಲದೆ ಈ ಸಂದರ್ಭ ಭಾರೀ ಶಬ್ಧದೊಂದಿಗೆ ಲೈನ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಈ ಘಟನೆ ವೀಕ್ಷಿಸುತ್ತಿದ್ದ ಗ್ರಾಮಸ್ಥರು ಭಯಭೀತರಾಗಿದ್ದರು. ಇದೇ ಸ್ಥಳದಲ್ಲಿ ಮಥ್ಥಾಯಿ ಎಂಬವರು ಮರದಿಂದ ತೆಂಗಿನ ಕಾಯಿ ತೆಗೆಯಲು ಹೋಗಿ ಈ ಹಿಂದೆ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ನಡೆದು 6 ತಿಂಗಳು ಕಳೆದಿತ್ತು.

ಈ ಬಗ್ಗೆ ‘ಶಕ್ತಿ’ ನಿನ್ನೆ ಗುರುವಾದ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿದ ಕುಶಾಲನಗರ ಇಲಾಖಾಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಇಂದು ಪರಿಹರಿಸಿದ್ದಾರೆ. ಕುಶಾಲನಗರದ ಸೆಸ್ಕ್ ಸಿಬ್ಬಂದಿ ಹರೀಶ್ ಮತ್ತು 6 ಮಂದಿಯ ತಂಡ ಈ ಸಮಸ್ಯೆಯನ್ನು ಬಗೆಹರಿಸಿ ಗ್ರಾಮಸ್ಥರ ಪ್ರಸಂಶೆಗೆ ಪಾತ್ರರಾಗಿದ್ದಾರೆ.

-ಚಿತ್ರ, ವರದಿ: ಕೊಡೆಕ್ಕಲ್ ಗಣೇಶ್