ಮಡಿಕೇರಿ, ಜೂ. 23: ತಲಕಾವೇರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶ ಸಂಬಂಧ ಈಗಾಗಲೇ ಏರ್ಪಡಿಸಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಫಲಗಳ ಸಂಬಂಧ ಸದ್ಯದಲ್ಲೇ ಆಡಳಿತ ಮಂಡಳಿಯ ಸಭೆ ಕರೆದು ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುವದಾಗಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.ತಲಕಾವೇರಿ ಕ್ಷೇತ್ರದಲ್ಲಿ ನಡೆಸಲಾದ ಏಳು ದಿನಗಳ ಅಷ್ಟಮಂಗಲ ಕುರಿತು ‘ಶಕ್ತಿ’ ಅಭಿಪ್ರಾಯ ಬಯಸಿದಾಗ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೈವಜ್ಞರು ಸೂಚಿಸಿರುವ ಎಲ್ಲ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗುವದು ಎಂದು ಆಶಯ ವ್ಯಕ್ತಪಡಿಸಿದರು.ಅಲ್ಲದೆ ಅಷ್ಟಮಂಗಲ ವೇಳೆ ಕ್ಷೇತ್ರದ ಅಭಿವೃದ್ಧಿ ಸಂಬಂಧ ಅನುಸರಿಸಬೇಕಾಗಿ ಮಾರ್ಗಗಳು ಪಾವಿತ್ರ್ಯ (ಮೊದಲ ಪುಟದಿಂದ) ಕಾಪಾಡುವ ದಿಸೆಯಲ್ಲಿ ಜಾರಿಗೊಳಿಸಬೇಕಿರುವ ನಿಯಮಗಳು ಹಾಗೂ ದೋಷ ಪರಿಹಾರ ಸಂಬಂಧ ದೊರೆತಿರುವ ದೈವಿಕ ಕೈಂಕರ್ಯಗಳ ಕುರಿತು ಶೀಘ್ರವೇ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಧಾರ್ಮಿಕ ದತ್ತಿ ಇಲಾಖೆಯ ಮಾರ್ಗದರ್ಶನ ಪಡೆಯಲಾಗುವದು ಎಂದರು.
ಈ ನಿಟ್ಟಿನಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯು ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿದಂತೆ ಸದ್ಭಕ್ತರ ಸಲಹೆಗಳೊಂದಿಗೆ ಕ್ಷೇತ್ರದ ತಂತ್ರಿಗಳು ಸೂಚಿಸಿದಂತೆ ಮುಂದಡಿ ಇಡುವದಾಗಿ ಅಭಿಪ್ರಾಯಪಟ್ಟಿರುವ ತಮ್ಮಯ್ಯ ಪ್ರಸಕ್ತ ಮಳೆಯಲ್ಲಿ ಏನೂ ಮಾಡಲು ಸಾಧ್ಯವಾಗದೆಂದು ಬೊಟ್ಟು ಮಾಡಿದರು.
ಹೀಗಾಗಿ ಸಾಧ್ಯವಿರುವಷ್ಟು ಬೇಗನೆ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಕುರಿತು ಸೂಕ್ತ ನಿರ್ಧಾರ ತೆಗೆದು ಕೊಳ್ಳುವ ಇಂಗಿತ ಹೊರಗೆಡವಿದರು.