ವರದಿ-ಚಂದ್ರಮೋಹನ್

ಕುಶಾಲನಗರ, ಜೂ. 22: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿದ್ದ ಕೆರೆಗಳು ಕಣ್ಮರೆಯಾಗುತ್ತಿ ರುವದು ಇತ್ತೀಚಿನ ಬೆಳವಣಿಗೆಯಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ಕುಶಾಲನಗರ ಪಟ್ಟಣದಲ್ಲಿ ಕಣ್ಣಿಗೆ ಕಾಣುತ್ತಿದ್ದ ಎರಡು ಐತಿಹಾಸಿಕ ಕೆರೆಗಳಾದ ತಾವರೆಕೆರೆ, ಸೋಮೇಶ್ವರ ಕೆರೆಗಳು ಖಾಸಗಿಯವರ ಬಡಾವಣೆಗಳಾಗಿ ಪರಿವರ್ತನೆ ಗೊಳ್ಳುತ್ತಿರುವದು ಕಂಡುಬಂದಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಭೂಮಿಯ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ನದಿಗಳ ಜಲಮೂಲಗಳಾದ ಕೆರೆ ತೊರೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಮಣ್ಣು ಹಾಕಿ ಮುಚ್ಚುವದ ರೊಂದಿಗೆ ನೀರಿನ ಹರಿವಿನ ಮೂಲಗಳಿಗೆ ಧಕ್ಕೆ ಉಂಟಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೌನ ತಾಳುತ್ತಿದ್ದಾರೆ.

ಮಡಿಕೇರಿ-ಕುಶಾಲನಗರ ಮುಖ್ಯರಸ್ತೆಯಲ್ಲಿರುವ ತಾವರೆಕೆರೆ ಈ ಭಾಗದ ಬೃಹತ್ ಕೆರೆಯಾಗಿದ್ದು ಒಂದು ಕಾಲದಲ್ಲಿ ಇದನ್ನು ನೋಡುವದೇ ಮನಮೋಹಕ ದೃಶ್ಯವಾಗಿತ್ತು. ಆದರೆ ಕುಶಾಲನಗರ ಪಟ್ಟಣ ಬೆಳೆಯುತ್ತಿದ್ದಂತೆ ಕೆರೆಯ ನಾಲ್ಕು ಕಡೆ ಬಹುತೇಕ ಒತ್ತುವರಿಯಾಗಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದೀಗ ಕೆರೆಯ ಹಿಂಭಾಗದಲ್ಲಿ ಬಡಾವಣೆಯೊಂದರ ಮಾಲೀಕರು ಕೆರೆಗೆ ಬೃಹತ್ ಕಲ್ಲು ಮತ್ತು ಮಣ್ಣು ತುಂಬುತ್ತಿರುವ ದೃಶ್ಯ ಗೋಚರಿಸಿದೆ. ಇನ್ನೊಂದೆಡೆ ಅಕ್ರಮವಾಗಿ ಕೆರೆಗೆ ಅಡ್ಡಲಾಗಿ ರಸ್ತೆ ನಿರ್ಮಿಸಿರುವುದು ಕೂಡ ಕಾಣಬಹುದು.

ಇದೀಗ 1 ಎಕರೆ 80 ಸೆಂಟ್ ವ್ಯಾಪ್ತಿಯ ಕೆರೆ ಕ್ಷೀಣಿಸುತ್ತಾ ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ. ಬಿಎಂ ರಸ್ತೆಯ ಪಕ್ಕದ ವಾಣಿಜ್ಯ ಕಟ್ಟಡಗಳಿಂದ ಹೊರಸೂಸುವ ಶೌಚ ತ್ಯಾಜ್ಯಗಳು ಸೇರಿದಂತೆ ಎಲ್ಲಾ ಕಲುಷಿತ ನೀರು ತಾವರೆಕೆರೆ ಪಾಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ದೂರಿದರೂ ಯಾವದೇ ರೀತಿಯ ಪ್ರಯೋಜನ ಕಂಡುಬಂದಿಲ್ಲ.

ಹಿಂದೊಮ್ಮೆ ಕೆರೆಯ ಅಭಿವೃದ್ಧಿಗಾಗಿ ಜಿ.ಪಂ. ಮೂಲಕ ರೂ. 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದರೂ ಕೆರೆಯಿಂದ ಮೇಲ್ಭಾಗಕ್ಕೆ ಹಾಕಿದ ಮಣ್ಣನ್ನು ಮತ್ತೆ ಕೆರೆಗೆ ತುಂಬಿಸಿದ ಪ್ರಕರಣವೂ ನಡೆದಿತ್ತು. ಕೆರೆಯ ಮೇಲ್ಭಾಗದಿಂದಲೇ ಒಳಚರಂಡಿ ಪೈಪ್‍ಗಳನ್ನು ನಿಯಮಬಾಹಿರವಾಗಿ ಅಳವಡಿಸಲಾಗಿದ್ದು ಜಲಮಂಡಳಿ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಇಂತಹ ಅಕ್ರಮಗಳನ್ನು ಕಂಡೂ ಕಾಣದಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಕುಡಾ ಅಧಿಕಾರಿಗಳು ಬಡಾವಣೆ ನಿರ್ಮಿಸಲು ನಿಯಮಬಾಹಿರವಾಗಿ ಅನುಕೂಲ ಕಲ್ಪಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕೆರೆಯ ವ್ಯಾಪ್ತಿಯ ಬಗ್ಗೆ ಹಿಂದೊಮ್ಮೆ ಸರ್ವೆ ಕಾರ್ಯ ನಡೆದಿತ್ತು. ಮತ್ತೆ ಮರುಸರ್ವೆ ಮಾಡಲು ಕೋರಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೆರೆಗೆ ನೀರು ಸೇರುವ ಜಾಗದಲ್ಲಿ ಪೈಪ್ ಅಳವಡಿಸಿ ಅಕ್ರಮವಾಗಿ ರಸ್ತೆ ನಿರ್ಮಿಸಿರುವ ಬಗ್ಗೆ ಕೂಡಲೆ ಜಿಲ್ಲಾಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದು ಕೆರೆಗೆ ಮಣ್ಣು ತುಂಬಿಸುತ್ತಿರುವ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಶಕ್ತಿ ಮೂಲಕ ಒತ್ತಾಯಿಸಿದ್ದಾರೆ.