ಮಡಿಕೇರಿ, ಜೂ. 23: ದಕ್ಷಿಣ ಗಂಗೆ ಶ್ರೀ ಕಾವೇರಿಮಾತೆಯ ಪಾವಿತ್ರ್ಯ ಕಾಪಾಡುವದರೊಂದಿಗೆ ಮಾತೃಸ್ವರೂಪಳಾಗಿರುವ ಆಕೆಯೊಂದಿಗೆ ಅವಿನಾಭಾವ ಸಂಬಂಧವನ್ನು ಭಾವನಾತ್ಮಕವಾಗಿ ಜನಕೋಟಿ ಬೆಸೆಯುವಂತಾಗಬೇಕೆಂದು ಆರ್.ಎಸ್.ಎಸ್.ನ ಮಂಗಳೂರು ವಿಭಾಗ ಪ್ರಚಾರಕ್ ಕೃಷ್ಣಪ್ರಸಾದ್ ಕರೆ ನೀಡಿದರು. ನಗರದ ಓಂಕಾರ ಸದನದಲ್ಲಿ ಏರ್ಪಡಿಸಿದ್ದ ಜೀವನದಿ ಕಾವೇರಿ ಪುನರುತ್ಥಾನ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
(ಮೊದಲ ಪುಟದಿಂದ) ವಿಂಧ್ಯಪರ್ವತದ ಬೆಳವಣಿಗೆಯಿಂದ ಸೂರ್ಯೋದಯಕ್ಕೆ ತೊಡಕಾಗದಂತೆ ದೂರದೃಷ್ಟಿ ಹರಿಸಿದ ಮಹರ್ಷಿ ಅಗಸ್ತ್ಯರ ಲೋಕ ಕಲ್ಯಾಣ ಕಾರ್ಯಗಳು ಮತ್ತು ಲೋಕೋದ್ಧಾರ ಕ್ಕಾಗಿ ಜಲರೂಪಿಣಿಯಾಗಿ ಹರಿದ ಜೀವನದಿ ಕಾವೇರಿಯ ಇತಿಹಾಸ ಎಲ್ಲ ಕಾಲಕ್ಕೂ ಮನುಕುಲಕ್ಕೆ ಆದರ್ಶವೆಂದು ಅವರು ನೆನಪಿಸಿದರು.ಅಂಥ ಕಾವೇರಿ ಒಡಲು ಇಂದು ಬತ್ತುತ್ತಿರುವ ಆತಂಕದೊಂದಿಗೆ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಪೂಜ್ಯಭಾವನೆ ಕಾಪಾಡಿಕೊಳ್ಳುವ ದಿಸೆಯಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ನೆಡುವದೂ ಸೇರಿದಂತೆ ಪ್ರಕೃತಿಯ ಸಂರಕ್ಷಣೆಯೊಂದಿಗೆ ಕಾವೇರಿ ಉಳಿವಿಗಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೃಷ್ಣಪ್ರಸಾದ್ ಬೊಟ್ಟು ಮಾಡಿದರು.
ಈ ಸಂಬಂಧ ಜುಲೈ 16ರಂದು ಕೊಡಗಿನ ಗ್ರಾಮ ಗ್ರಾಮಗಳಿಂದ ತಲಕಾವೇರಿ ಪರಿಸರದಲ್ಲಿ ಉತ್ತಮ ಜಾತಿಯ ಮರ - ಗಿಡಗಳನ್ನು ನೆಟ್ಟು ಜಾಗೃತಿಯೊಂದಿಗೆ ವನ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಜಲಮೂಲ ಸಂರಕ್ಷಣೆಗೆ ಆದ್ಯತೆ ನೀಡಲಾಗುವದು ಎಂದು ಆರ್.ಎಸ್.ಎಸ್.ನ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ಇದೇ ಸಂದರ್ಭ ನುಡಿದರು. ಕಾವೇರಿ ನದಿ ಸಂರಕ್ಷಣೆಗಾಗಿ ಇಂದು ಆಂದೋಲನದ ಮೂಲಕ ಜನಜಾಗೃತಿಯ ಅವಶ್ಯಕತೆಯನ್ನು ಅವರು ನೆನಪಿಸಿದರು.
ಅಲ್ಲದೆ ತುಲಾ ಸಂಕ್ರಮಣ ಜಾತ್ರೆಗೆ ಮೊದಲು ಜಿಲ್ಲೆಯ ಎಲ್ಲ ಗ್ರಾಮ ದೇವಾಲಯಗಳನ್ನು ಕೇಂದ್ರವಾಗಿ ಇಟ್ಟುಕೊಂಡು ದಕ್ಷಿಣ ಕೊಡಗಿನ ಕುಟ್ಟ ಮತ್ತು ಉತ್ತರ ಕೊಡಗಿನ ಕೊಡ್ಲಿಪೇಟೆಯಿಂದ ಎರಡು ಜಾಗೃತಿ ಜಾಥಾ ಆರಂಭಿಸಲಾಗುವದು ಎಂದು ಅವರು ಮಾಹಿತಿ ನೀಡಿದರು. ಈ ಎರಡು ಯಾತ್ರೆಗಳು ಕಾವೇರಿ ಜಾತ್ರೆಯಂದು ತಲಕಾವೇರಿಯಲ್ಲಿ ಸಂಗಮಗೊಳ್ಳುವ ಮುಖಾಂತರ ಜಾಗೃತಿ ಅಭಿಯಾನ ಪೂರೈಸಲಾಗುವದು ಎಂದು ಮಾರ್ನುಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನ. ಸೀತಾರಾಂ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿ ಪ್ರಮುಖರು ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ವನ ಅಭಿವೃದ್ಧಿ ಮತ್ತು ಜನಜಾಗೃತಿ ರಥಯಾತ್ರೆಯ ಬಗ್ಗೆ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ, ಚಿರಿಯಪಂಡ ರಾಜಾನಂಜಪ್ಪ, ಎಂ.ಎಂ.ರವೀಂದ್ರ, ಮಂಡೆಪಂಡ ಸುಜಾಕುಶಾಲಪ್ಪ ಮನುಮುತ್ತಪ್ಪ, ಜಪ್ಪು ಅಚ್ಚಪ್ಪ, ಕೋಡಿ ಪೊನ್ನಪ್ಪ, ಕಾಂತಿ ಸತೀಶ್, ಜೀವನ್, ಅಜಿತ್ , ಕಾಳನ ರವಿ, ನಾಪಂಡ ರವಿಕಾಳಪ್ಪ, ಅಚ್ಚಪಂಡ ಮಹೇಶ್, ಅನಿತ ಪೂವಯ್ಯ, ಶಿವಕುಮಾರಿ, ಲಕ್ಷ್ಮಿ ರಮೇಶ್ ಹೊಳ್ಳ ಹಾಗೂ ಇತರರು ಭಾಗವಹಿಸಿದ್ದರು.
ಉಡೋತ್ ಚಂದ್ರ ಕಾರ್ಯಕ್ರಮ ನಿರೂಪಿಸಿದರೆ, ಟಿ.ಎಸ್. ನಾರಾಯಣಾಚಾರ್ ಪ್ರಾರ್ಥಿಸಿ, ಎಂ.ಬಿ. ದೇವಯ್ಯ ವಂದಿಸಿದರು.