ಸೋಮವಾರಪೇಟೆ, ಜೂ.22: ತಾಲೂಕಿನ ಪುಷ್ಪಗಿರಿ ಅರಣ್ಯದ ಪಶ್ಚಿಮಘಟ್ಟ ಸಾಲಿಗೆ ಹೊಂದಿಕೊಂಡಂತೆ ಇರುವ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟಗೊಳಿಸುತ್ತಿವೆ.
ಕಳೆದ ಕೆಲ ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಧಾಳಿ ನಡೆಸುತ್ತಿದ್ದು, ನಿನ್ನೆ ರಾತ್ರಿ ಕೂತಿ ಗ್ರಾಮದ ಕೀರ್ತಿ ಬೋಪಯ್ಯ ಅವರ ತೋಟದಲ್ಲಿ ಮನಸೋಯಿಚ್ಛೆ ಸಂಚರಿಸಿ 50ಕ್ಕೂ ಅಧಿಕ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಮರಿ ಆನೆಯನ್ನು ಒಳಗೊಂಡಂತೆ ಸುಮಾರು 10ಕ್ಕೂ ಅಧಿಕ ಆನೆಗಳು ಈ ಭಾಗದಲ್ಲಿ ಬೀಡುಬಿಟ್ಟಿವೆ.
ಕಳೆದ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಅರಣ್ಯಕ್ಕೆ ಅಟ್ಟಿದ್ದು, ಇದರಲ್ಲಿ ನಾಲ್ಕೈದು ಆನೆಗಳು ಗುಂಪಿನಿಂದ ತಪ್ಪಿಸಿಕೊಂಡು ತೋಟದೊಳಗೇ ಉಳಿದುಕೊಂಡಿವೆ.
ಇದರಿಂದಾಗಿ ಗ್ರಾಮಸ್ಥರು ನಡೆದಾಡಲೂ ಭಯಪಡುವ ಸನ್ನಿವೇಶ ನಿರ್ಮಾಣವಾಗಿದ್ದು, ಬೆಳಿಗ್ಗೆ 10 ಗಂಟೆಯ ನಂತರ ತೋಟಕ್ಕೆ ತೆರಳಿ ಮಧ್ಯಾಹ್ನದ ವೇಳೆಗೆ ಮನೆಗೆ ವಾಪಸ್ಸಾಗುತ್ತಿದ್ದಾರೆ. ತೋಟಕ್ಕೆ ಗೊಬ್ಬರ ಹಾಕಲೂ ಸಹ ಹಿಂದೇಟು ಹಾಕುವ ಸ್ಥಿತಿಯಿದ್ದು, ಸಂಜೆ 4 ಗಂಟೆಯ ನಂತರ ಪ್ರತಿದಿನ ಪಟಾಕಿ ಹೊಡೆಯುವ ಪರಿಪಾಠ ಎದುರಾಗಿದೆ ಎಂದು ಗ್ರಾಮದ ಲಕ್ಷ್ಮೀಕಾಂತ್ ಕೊಮಾರಪ್ಪ ತಿಳಿಸಿದ್ದಾರೆ.
ತಂಬಳಗೇರಿ, ಎಡದಂಟೆ, ಕೂತಿ, ಮಾಗೇರಿ, ಕುಂದಳ್ಳಿ ವ್ಯಾಪ್ತಿಯಲ್ಲಿ ಈ ಆನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಜೀವಭಯದಿಂದ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅರಣ್ಯ ಇಲಾಖಾಧಿಕಾರಿಗಳು ಗಮನಹರಿಸಿ ಆನೆಗಳ ಉಪಟಳದಿಂದ ಪಾರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.