ಪೊನ್ನಂಪೇಟೆ, ಜೂ. 23: ಕೊಡವ ಮುಸ್ಲಿಮರ ಪ್ರಾತಿನಿಧಿಕ ಸಾಮಾಜಿಕ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ತನ್ನ ಅಧೀನದಲ್ಲಿ ಕೊಡವ ಮುಸ್ಲಿಂ ಶಿಕ್ಷಣ ನಿಧಿ(ಕೆ.ಎಂ.ಇ.ಎಫ್.) ಯನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಸಂಸ್ಥೆಯ ಕಳೆದ ವಾರ್ಷಿಕ ಮಹಾಸಭೆಯ ತೀರ್ಮಾನದಂತೆ ಕೆ.ಎಂ.ಎ. ಸಂಸ್ಥೆಗೆ 40 ವರ್ಷ ಪೂರ್ಣಗೊಂಡ ಹಿನ್ನೆಲೆ ಈ ವರ್ಷಾಚರಣೆಯ ಸ್ಮರಣಾರ್ಥವಾಗಿ ಕೊಡವ ಮುಸ್ಲಿಂ ಶಿಕ್ಷಣ ನಿಧಿಯನ್ನು ಜಾರಿಗೆ ತರಲಾಗಿದೆ.
ವೀರಾಜಪೇಟೆಯ ಡಿ.ಹೆಚ್.ಎಸ್. ಕಟ್ಟಡದಲ್ಲಿರುವ ಕೆ.ಎಂ.ಎ. ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನವಾಗಿ ವಿನ್ಯಾಸಗೊಳಿಸಲಾದ ಕೆ.ಎಂ.ಇ.ಎಫ್. ಲಾಂಛನವನ್ನು ಕೆ.ಎಂ.ಎ. ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಅನಾವರಣಗೊಳಿಸುವ ಮೂಲಕ ಕೊಡವ ಮುಸ್ಲಿಂ ಶಿಕ್ಷಣ ನಿಧಿಯನ್ನು ಲೋರ್ಕಾಪಣೆಗೊಳಿಸಿದರು.
ಪತ್ರಕರ್ತ ರಫೀಕ್ ತೂಚಮಕೇರಿ ಅವರು ರಚಿಸಿದ ಕೆ.ಎಂ.ಇ.ಎಫ್.ನ ಒಳನಿಯಮಾವಳಿಯನ್ನು ಸಭೆಯಲ್ಲಿ ಓದಿದ ನಂತರ ಕೊಡವ ಮುಸ್ಲಿಂ ಶಿಕ್ಷಣ ನಿಧಿಗೆ ಕಾರ್ಯಕಾರಿ ಸಮಿತಿ ಪೂರ್ಣ ಒಪ್ಪಿಗೆ ಸೂಚಿಸಿತು. ಈ ಹಿನ್ನೆಲೆ ಕೊಡವ ಮುಸ್ಲಿಂ ಶಿಕ್ಷಣ ನಿಧಿ ಅಸ್ತಿತ್ವಕ್ಕೆ ಬಂದಂತಾಯಿತು ಎಂದು ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಸಭೆಯಲ್ಲಿ ಘೋಷಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಮಾತನಾಡಿ, ಕೊಡವ ಮುಸ್ಲಿಂ ಅಸೋಸಿಯೇಷನ್ ಮೊದಲಿನಿಂದಲೂ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಶಿಕ್ಷಣದಲ್ಲಿ ಸಾಧನೆ ಮಾಡಿದರೆ ಇಡೀ ಜನಾಂಗವೇ ಪ್ರಗತಿ ಸಾಧಿಸಿದಂತಾಗುತ್ತದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುವ ಪ್ರಮುಖ ಆಶಯದೊಂದಿಗೆ ಕೊಡವ ಮುಸ್ಲಿಂ ಶಿಕ್ಷಣ ನಿಧಿಯನ್ನು ಅಸ್ತಿತ್ವಕ್ಕೆ ತಂದಿರುವದಾಗಿ ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಕೆ.ಎಂ.ಎ. ವಿದ್ಯಾರ್ಥಿ ವೇತನ’ ಮತ್ತು ಕಳೆದ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ಮತ್ತು ಮದರಸ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ’ ವಿತರಣಾ ಸಮಾರಂಭವನ್ನು ಸಂಸ್ಥೆಯ ವತಿಯಿಂದ ಮುಂದಿನ ತಿಂಗಳು ವೀರಾಜಪೇಟೆ ಯಲ್ಲಿ ಆಯೋಜಿಸಲಾಗುವದು ಎಂದು ಹೇಳಿದರು.
ಸಭೆಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ, ಪದಾಧಿಕಾರಿಗಳಾದ ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಅಬ್ದುಲ್ಲಾ ಹಾಜಿ, ಕುಪ್ಪಂದಿರ ಎಂ. ಯಾಹ್ಯ, ತಾ.ಪಂ. ಮಾಜಿ ಸದಸ್ಯರಾದ ಕುವೇಂಡ ವೈ. ಆಲಿ, ಚಿಮ್ಮಿಚೀರ ಕೆ. ಇಬ್ರಾಹಿಂ (ಉಮ್ಣಿ) ಪೊಯಕ್ಕೆರ ಎಸ್. ಮೊಹಮದ್ ರಫೀಕ್, ಪೇನತಂಡ ಎಂ. ಅಬ್ದುಲ್ ರಹಿಮಾನ್, ಕೋಪಟ್ಟೀರ ಎಂ. ಖಾದರ್, ಮೀತಲತಂಡ ಎಂ. ಇಸ್ಮಾಯಿಲ್, ಕರ್ತೋರೆರ ಕೆ.ಮುಸ್ತಾಫ, ಕುರಿಕಡೆರ ಎ. ಅಬ್ದುಲ್ ಸಮದ್, ಕುಪ್ಪೋಡಂಡ ಎ. ಅಬ್ದುಲ್ ರಶೀದ್, ಪುದಿಯಾಣೆರ ಹನೀಫ, ಪುದಿಯತ್ತಂಡ ಹೆಚ್. ಸಂಶುದ್ದೀನ್, ಪುಡಿಯಂಡ ಯು. ಹನೀಫ, ಮಂಡೇಂಡ ಎ. ಮೊಯಿದು ಮೊದಲಾದವರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸ್ವಾಗತಿಸಿದರು. ಆಲೀರ ಎ. ಅಹಮದ್ ಹಾಜಿ ವಂದಿಸಿದರು.