ಮಡಿಕೇರಿ, ಜೂ. 23: ಭಾರತೀಯ ಸೇನೆಯ ಪ್ರಪ್ರಥಮ ಮಹಾದಂಡನಾಯಕ ಕೊಡಗಿನ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಪ್ರತಿಮೆಯನ್ನು ತಮಿಳುನಾಡಿನ ಚೆನ್ನೈಯಲ್ಲಿ ಅನಾವರಣ ಗೊಳಿಸ ಲಾಗಿದೆ. ಈ ಮೂಲಕ ಕೊಡಗಿನ ವೀರ ಸೇನಾನಿಗೆ ತಮಿಳುನಾಡಿನಲ್ಲಿ ಗೌರವ ದೊರೆತಂತಾಗಿರುವದು ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೂ ಸಂದ ಗೌರವವಾಗಿದೆ. ಏಳು ಅಡಿ ಎತ್ತರದ ಈ ಪ್ರತಿಮೆಯ ತಳ ಭಾಗ 4 ಅಡಿಗಳಿವೆ. ಈ ಪ್ರತಿಮೆಯನ್ನು ಬೆಂಗಳೂರು ಬಳಿ ಬಿಡದಿಯ ಕಲಾವಿದ ವಿಜಯಕುಮಾರ್ ಅವರು ತಯಾರಿಸಿದ್ದಾರೆ.ಚೆನ್ನೈಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಓ.ಟಿ.ಎ) ಕಾರ್ಯಪ್ಪ ಅವರ (ಮೊದಲ ಪುಟದಿಂದ) ಆಳುದ್ದದ ಕಂಚಿನ ಪ್ರತಿಮೆಯನ್ನು ಇಂದು ಅನಾವರಣ ಗೊಳಿಸಲಾಗಿದೆ. ಇದು ಇಡೀ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಜಿಲ್ಲೆಯ ಹಿರಿಯ ಸೇನಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಶಾರ್ಟ್ ಸರ್ವೀಸ್ 5ನೇ ಬ್ಯಾಚ್‍ನ ಮೂಲಕ ಕಮೀಷನ್ಡ್ ಪಡೆದ 50ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಇಂದು ಉದ್ಘಾಟಿಸಲಾಯಿತು. ತಮಿಳುನಾಡಿನಲ್ಲಿ ಇದು ಕೊಡಗಿನ ಹಿರಿಯ ಸೇನಾಧಿಕಾರಿಯ ಪ್ರಥಮ ಪ್ರತಿಮೆಯೂ ಆಗಿರುವದು ವಿಶೇಷ.
ಈ ಸಂದರ್ಭ ಫೀ.ಮಾ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ ಕುಟುಂಬ ಸೇರಿದಂತೆ ನಿವೃತ್ತ ಮೇಜರ್ ಜನರಲ್ ಟಿ.ಕೆ. ಕೌಲ್, ಮೇಜರ್ ಜನರಲ್ ವಿ.ಡಿ. ಚೌಗುಲೆ ಸೇರಿದಂತೆ ಅಮೇರಿಕಾ, ಲಂಡನ್, ಕೆನಡಾಗಳಿಂದಲೂ ಆಗಮಿಸಿದ್ದ ಅಧಿಕಾರಿಗಳು, ಇನ್ನಿತರ ಸೇನಾಧಿಕಾರಿಗಳ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಮಾತನಾಡಿ, ನನ್ನ ತಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅಪಾರ ಗೌರವವಿತ್ತು ಎಂದು ನೆನಪಿಸಿಕೊಂಡರು. ಅಲ್ಲದೆ ದೇಶದ ಯೋಧರ ಬಗ್ಗೆಯೂ ತನ್ನ ತಂದೆಗೆ ಅಪಾರ ಗೌರವವಿತ್ತು ಎಂಬದನ್ನು ಜ್ಞಾಪಿಸಿಕೊಂಡರು.
ಮೇಜರ್ ಜನರಲ್ ವಿ.ಡಿ. ಚೌಗುಲೆ ಅವರು ಮಾತನಾಡಿ, ಕಾರ್ಯಪ್ಪ ಅವರ ಪ್ರತಿಮೆ ನಮ್ಮ ದೇಶದ ಭವಿಷ್ಯದ ಯೋಧರಿಗೆ ಪ್ರೇರಕ ಶಕ್ತಿಯಾಗಲಿದೆ ಎಂದು ತಿಳಿಸಿದರು.
ಮೇಜರ್ ಜನರಲ್ ಟಿ.ಕೆ. ಕೌಲ್ ಅವರು ಮಾತನಾಡಿ ಕಾರ್ಯಪ್ಪ ಅವರು ಭಾರತದ ಸೇನೆಯ ‘ತಂದೆ’ ಎನಿಸಿ ಕೊಂಡಿದ್ದಾರೆ ಎಂದು ನುಡಿದರು.