ಗೋಣಿಕೊಪ್ಪಲು, ಜೂ. 23 : ಜಿಲ್ಲೆಯ ಕೆಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಯೊಂದಿಗೆ ಚರ್ಚಿಸಿ ಕೂಡಲೇ ಬಗೆಹರಿಸಿಕೊಡುವಂತೆ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.ಹಿಂದುಳಿದ ವರ್ಗದ ವಸತಿ ನಿಲಯಗಳಲ್ಲಿ ಬಾಣಸಿಗರಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಸಿಬ್ಬಂದಿಯನ್ನು ಇದೀಗ ಏಕಾಏಕಿ ಕೆಲಸದಿಂದ ವಜಾಗೊಳಿಸಿ ಈ ಸ್ಥಾನಕ್ಕೆ ಬೇರೆ ಸಿಬ್ಬಂದಿಗಳನ್ನು ಆನ್‍ಲೈನ್ ಮೂಲಕ ಆಯ್ಕೆ ಮಾಡಲಾಗಿದೆ. ಇದರಿಂದ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಈ ಬಗ್ಗೆ ಕ್ರಮ ವಹಿಸಿ ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಮಹಿಳೆಯರಿಗೆ ಉದ್ಯೋಗದಲ್ಲಿ ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಸಂಪೂರ್ಣ ಕೃಷಿ ಸಾಲ ಮನ್ನಾದ ಬಗ್ಗೆ ಗಮನ ಸೆಳೆದಿರುವ ಅವರು ಇತ್ತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ,
(ಮೊದಲ ಪುಟದಿಂದ) ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಾಲ ಮನ್ನಾದ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಮನವಿ ನೀಡಿದ್ದಾರೆ. ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರ ಸಾಲ ಮನ್ನಾ ಸೇರಿದಂತೆ ರೈತರ ಸಾಲ ಮನ್ನಾ ಮಾಡುವಲ್ಲಿ ಆದಷ್ಟು ಬೇಗನೇ ನಿರ್ಧಾರ ಕೈಗೊಳ್ಳುವಂತೆ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಸಮುದಾಯದವರು ವಾಸವಿದ್ದು, ಇವರಿಗೆ ಸಮುದಾಯದ ವಿಚಾರದಲ್ಲಿ ಇಲ್ಲಿಯ ತನಕ ಯಾವದೇ ಸಮುದಾಯ ಭವನ ನೀಡಿರುವದಿಲ್ಲ. ಇವರಿಗೆ ಸಮುದಾಯ ಭವನ ನಿರ್ಮಿಸಲು ಸರ್ಕಾರಿ ಜಾಗ ಮಂಜೂರು ಮಾಡಿಕೊಡಲು ಹಾಗೂ ಭವನ ನಿರ್ಮಾಣಕ್ಕೆ ಆದ್ಯತೆ ಮೇರೆ ಅನುದಾನ ನೀಡಲು ಕೋರಿದ್ದಾರೆ. ಜಿಲ್ಲೆಯ ವೀರಾಜಪೇಟೆ ತಾಲೂಕಿನ ದ. ಕೊಡಗಿನಲ್ಲಿ ನಿರಂತರವಾಗಿ ಹುಲಿ ಹಾವಳಿಯಿಂದ ರೈತರ ಜಾನುವಾರುಗಳು ಬಲಿಯಾಗುತ್ತಿವೆ. ಈ ಬಗ್ಗೆ ಹಲವು ಬಾರಿ ಕೊಡಗಿನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಗಳಿಗೆ ಈ ಬಗ್ಗೆ ವಿಶೇಷ ಗಮನ ಹರಿಸಲು ಒತ್ತಡ ಹೇರಿದ್ದರೂ ಈ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ.
ಕಾಡಿನಿಂದ ನಾಡಿಗೆ ಕಾಡಾನೆಗಳ ಪ್ರವೇಶದಿಂದ ರೈತರ, ಕಾಫಿ ಬೆಳೆಗಾರರ ತೋಟಗಳು ನಷ್ಟಗೊಂಡಿದ್ದು, ಸಕಾಲದಲ್ಲಿ ಇವರಿಗೆ ಪರಿಹಾರ ಸಿಗುತ್ತಿಲ್ಲ. ಕಾಡಾನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಲಾಖೆ ಮೀನಾ ಮೇಷ ಎಣಿಸುತ್ತಿದೆ. ಕೊಡಗು ಜಿಲ್ಲೆಯ ಮುಖ್ಯ ಸಂರಕ್ಷಣಾಧಿಕಾರಿಗಳು ಆನೆ ಮಾನವ ಸಂಘರ್ಷ ಹಾಗೂ ಹುಲಿ ಹಾವಳಿಯಿಂದ ಕಂಗೆಟ್ಟಿರುವ ರೈತರ ಸಂಕಷ್ಟಕ್ಕೆ ಹಾಗೂ ಸಾವು ನೋವಿಗೆ ಸಿಲುಕಿದಲ್ಲಿ ಸ್ಥಳಕ್ಕೆ ಆಗಮಿಸುತ್ತಿಲ್ಲ. ಇವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸುಧೀರ್ಘವಾದ ವರದಿಯನ್ನು ಸರಕಾರಕ್ಕೆ ಒದಗಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬದಾಗಿ ಮನವಿಯಲ್ಲಿ ವಿವರಿಸಿದ್ದಾರೆ.
ರಾಜ್ಯದೆಲ್ಲೆಡೆ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಸಂಬಳವಿಲ್ಲದೆ 5 ತಿಂಗಳಿಗೂ ಹೆಚ್ಚಿನ ಸಮಯ ಕಳೆದಿದೆ. ಕೊಡಗು ಜಿಲ್ಲೆಯಲ್ಲಿಯೂ ಇರುವ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ಸಮಸ್ಯೆ ಉಲ್ಭಣಗೊಂಡಿದೆ. ಕಷ್ಟದಲ್ಲಿರುವ ಪೌರಕಾರ್ಮಿಕರ ಸಮಸ್ಯೆಗೆ ಸರ್ಕಾರ ತಕ್ಷಣ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ. ಬೆಂಗಳೂರಿನ ಪಧ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಸುದೀರ್ಘವಾಗಿ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ ಸಂಕೇತ್ ಪೂವಯ್ಯ ಈ ಬಾರಿ ಸುರಿದ ಮಳೆಯಿಂದ ರಸ್ತೆ, ಸೇತುವೆ, ರಾಜ್ಯ ಹೆದ್ದಾರಿಗಳು ಹಾನಿಯಾಗಿವೆ. ನೂರಾರು ಕುಟುಂಬದ ಮನೆಗಳು ಮಳೆಯಿಂದ ಜಖಂಗೊಂಡಿವೆ. ಸೂಕ್ತ ಪರಿಹಾರ ನೀಡಲು ಮನವಿ ಮಾಡಿಕೊಂಡರು. ಭೇಟಿ ಸಂದರ್ಭ ಜಿಲ್ಲೆಯ ರಾಜಕಾರಣದ ಬಗ್ಗೆಯು ಸಂಕೇತ್ ಪೂವಯ್ಯ ವಿವರಿಸಿದರು. ಸಂದರ್ಭ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಾದ್ಯಕ್ಷ ಎಸ್.ಎಚ್. ಮತೀನ್, ನಗರ ಅಧ್ಯಕ್ಷ ಪಿ.ಎ. ಮಂಜುನಾಥ್ ಹಾಗೂ ಪಕ್ಷದ ಕೆಲವು ಮುಖಂಡರು ಹಾಜರಿದ್ದರು.