ವೀರಾಜಪೇಟೆ, ಜೂ. 23: ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಹೈಟೆಕ್ ಶೌಚಾಲಯವನ್ನು ಟೆಂಡರ್ ಪ್ರಕ್ರಿಯೆ ನಡೆಸಿ ಉಪಯೋಗಕ್ಕೆ ನೀಡುವದರಿಂದ ಸಾರ್ವಜನಿಕರಿಗೆ ಸೌಲಭ್ಯವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಿರ್ಣಯ ಕ್ಯೆಗೊಳ್ಳಲಾಯಿತು.
ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೈಟೆಕ್ ಶೌಚಾಲಯವನ್ನು ಈ ಹಿಂದೆ 30 ವರ್ಷಕ್ಕೆ ಗುತ್ತಿಗೆ ನೀಡಲಾಗಿದ್ದು ಸಾರ್ವಜನಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ. ಪಂಚಾಯಿತಿಯಿಂದ ನಿರ್ಮಾಣ ಮಾಡಿದ ಶೌಚಾಲಯವನ್ನು ಟೆಂಡರ್ ನಡೆಸಿ ನಿರ್ವಹಣೆ ಸರಿ ಇಲ್ಲದಿದ್ದರೆ ಟೆಂಡರ್ ಗುತ್ತಿಗೆಯನ್ನು ರದ್ದುಗೊಳಿಸಲು ಪಂಚಾಯಿತಿಗೆ ಅವಕಾಶ ಇದೆ. ಟೆಂಡರ್ ಪ್ರಕ್ರಿಯೆ ನಡೆಸಿ ಎಂದು ಸದಸ್ಯ ವಿಶ್ವನಾಥ್ ಅವರ ಹೇಳಿಕೆಗೆ ಸಭೆ ಒಪ್ಪಿಗೆ ಸೂಚಿಸಿತು.
ಕಳೆದ 6 ತಿಂಗಳಿಂದ ಪೌರ ಕಾರ್ಮಿಕರಿಗೆ ಸಂಬಳ ನೀಡುತ್ತಿಲ್ಲ ಎಂದು ಸದಸ್ಯೆ ನಾಗಮ್ಮ ಸಭೆಗೆ ತಿಳಿಸಿದಾಗ ಉತ್ತರಿಸಿದ ಅಧ್ಯಕ್ಷ ಇ.ಸಿ. ಜೀವನ್ ಸರ್ಕಾರ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನೇಮಿಸಿದ್ದಾರೆ. ನಮ್ಮಲ್ಲಿ 44 ಜನರು ಇದ್ದರು. ಸರ್ಕಾರದ ಸುತ್ತೋಲೆಯಂತೆ 28 ಜನರನ್ನು ತೆಗೆದು ಹಾಕಲಾಗಿದೆ. ಮುಂದೆ ಕೆಲಸ ಸಿಗುವ ಭರವಸೆಯಿಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ವ್ಯವಹಾರ ನಡೆಸಬೇಕು ಎಂದು ಸಭೆಗೆ ತಿಳಿಸಿದರು.
ಮುಖ್ಯಾಧಿಕಾರಿ ಹೇಮಕುಮಾರ್ ಮಾತನಾಡಿ ಕೆಲಸ ಕಳೆದುಕೊಂಡವರು ಮುಖ್ಯಾಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾರೆ. ನೌಕರರನ್ನು ಕೆಲಸದಿಂದ ತೆಗೆಯಬೇಡಿ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಿಂದ ಪತ್ರ ಬರೆದಿದ್ದಾರೆ. ಸಂಬಳ ಕೊಡಿ ಎಂದು ಪತ್ರದಲ್ಲಿ ತಿಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಾವiಗಾರಿಯನ್ನು ಟೆಂಡರ್ ಪಡೆದುಕೊಂಡು ಕಾಮಗಾರಿ ಗುತ್ತಿಗೆದಾರ ಶಿವದಾಸ್ ಅವರ ಗುತ್ತಿಗೆಯನ್ನು ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಇನ್ನು ಮುಂದೆ ಯಾವದೇ ಕಾವiಗಾರಿಯನ್ನು ನೀಡಬಾರದು. ಸಂಸ್ಥೆಗೆ ಆದ ನಷ್ಟವನ್ನು ಅವರ ಇ.ಎಂ.ಡಿ. ಹಣದಲ್ಲಿ ಮುಟ್ಟುಗೋಲು ಹಾಕಿಕೊಂಡು ಉಳಿದ ಹಣವನ್ನು ಕಾನೂನು ರೀತಿಯಲ್ಲಿ ವಸೂಲು ಮಾಡುವಂತೆ ಸಭೆ ತೀರ್ಮಾನಿಸಿತು.
ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆದಿಲ್ಲ ಎಂದು ಸದಸ್ಯೆ ಶೀಬಾ ಪ್ರಥ್ವಿನಾಥ್ ಸಭೆಗೆ ತಿಳಿಸಿದಾಗ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ನೀವು ಸಭೆಯಲ್ಲಿ ಭಾಗವಹಿಸಿದ್ದೀರಾ ಯಾರದೋ ಮಾತು ಕೇಳಿಕೊಂಡು ಆರೋಪ ಮಾಡುತ್ತಿದ್ದೀರಾ ಎಂದು ಅಧ್ಯಕ್ಷರು ಉತ್ತರ ನೀಡಿದಾಗ ಬಹುತೇಕ ಸದಸ್ಯರು ಅಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸಿದರು.
ಬೀದಿ ದೀಪ, ಕುಡಿಯುವ ನೀರಿನ ಪೂರೈಕೆ ಜನಪರ ಕಾಮಗಾರಿ ಕುರಿತು ಚರ್ಚೆ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಕಾವiಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಹೇಮಕುಮಾರ್ ಉಪಸ್ಥಿತರಿದ್ದರು.