ಸುಂಟಿಕೊಪ್ಪ, ಜೂ. 23: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಜಾಗೃತಿ ಹಾಗೂ ಮಲೇರಿಯ ನಿರೋಧ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಲೇರಿಯ, ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗಗಳು ಸೊಳ್ಳೆಯಿಂದ ಹರಡುತ್ತದೆ. ಈಗಾಗಲೇ ಒಬ್ಬರಿಗೆ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿದ್ದು ಅವರಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುತ್ತಿದ್ದಾರೆ.
ತೀವ್ರವಾದ ಜ್ವರ ನಡುಕ ಚಳಿ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಶುಚಿಯನ್ನು ಕಾಪಾಡಿಕೊÀಳ್ಳುವದರೊಂದಿಗೆ ಎಲ್ಲಿಯೂ ಸೊಳ್ಳೆಗಳು ಉತ್ಪತ್ತಿಗೊಳ್ಳದಂತೆ ಎಚ್ಚರವಹಿಸಬೇಕು. ಇವುಗಳನ್ನು ತಡೆಗಟ್ಟಲು ಮುಂದಾದರೆ ಅನಾಹುತದಿಂದ ಪಾರಾಗಬಹುದು ಎಂದರು. ಮಳೆಗಾಲದಲ್ಲಿ ಚರಂಡಿ ಹಳ್ಳ, ತೆಂಗಿನ ಚಿಪ್ಪು, ಟಯರ್‍ಗಳಲ್ಲಿ ನೀರು ಶೇಖರಣೆ ಗೊಳ್ಳದಂತೆ ಎಚ್ಚರಿಕೆ ಅಗತ್ಯ ಇಂತಹ ಸ್ಥಳಗಳಲ್ಲಿ ಸೊಳ್ಳೆಗಳು ಒಮ್ಮೆಗೆ 1000 ಮೊಟ್ಟೆಯಿಡುತ್ತದೆ ಇದರಿಂದ ಸೊಳ್ಳೆಗಳು ಅಧಿಕ ಸಂಖ್ಯೆಯಲ್ಲಿ ಉತ್ಪತ್ತಿಯಾಗಿ ವಿವಿಧ ರೋಗಗಳನ್ನು ಹರಡುತ್ತದೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯರು, ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭ ಮಹಿಳಾ ವೈದ್ಯೆ ಡಾ. ಪಾರ್ವತಿ, ಹಿರಿಯ ಆರೋಗ್ಯ ಸಹಾಯಕಿ ಬಿ.ಟಿ. ಚಂದ್ರಮ್ಮ, ಕಿರಿಯ ಆರೋಗ್ಯ ಸಹಾಯಕಿಯರು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.