ಮಡಿಕೇರಿ, ಜೂ. 22: ವೀರಾಜಪೇಟೆ ತಾಲೂಕಿನ ತಟ್ಟೆಕೆರೆಯು ಶೀತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ವಾಸ ಮಾಡಲು ಯೋಗ್ಯವಿಲ್ಲ ಎಂಬದು ಕೇಳಿಬರುತ್ತಿರುವ ಹಿನ್ನೆಲೆ, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಟ್ಟೆಕೆರೆಯಲ್ಲಿ ಶೀಘ್ರ ಸಭೆ ಏರ್ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜ ನಿವೇಶನ ರಹಿತ ಕುಟುಂಬಗಳ ಪಟ್ಟಿ ನೀಡುವಂತೆ ಹಲವು ಸಭೆಗಳಲ್ಲಿ ತಿಳಿಸಲಾಗಿದೆ. ಆದರೆ ಇನ್ನೂ ಸಮರ್ಪಕ ಮಾಹಿತಿ ಒದಗಿಸಿಲ್ಲ ಎಂದ ಜಿಲ್ಲಾಧಿಕಾರಿ ಅವರು, ಈಗಾಗಲೇ 94ಸಿ ಮತ್ತು 94ಸಿಸಿ ರಡಿ ನಿವೇಶನ ಹಂಚಿಕೆ ಹೊರತುಪಡಿಸಿ, ಉಳಿದಂತೆ ನಿವೇಶನ ರಹಿತರ ಪಟ್ಟಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲೆಯ ಹಲವು ಕಡೆಗಳಲ್ಲಿ ಪರಿಶಿಷ್ಟರಿಗೆ ನಿವೇಶನ, ಸ್ಮಶಾನ ಭೂಮಿ, ರಸ್ತೆ ಹಾಗೂ ಮೂಲಸೌಲಭ್ಯ ಕಲ್ಪಿಸುವ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿಗೆ ಹೇಳಿದರು.

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ನಿವೇಶನ ರಹಿತರಿಗೆ ನಿವೇಶನ, ಸ್ಮಶಾನ ಭೂಮಿ, ಹಾಗೆಯೇ ಅಗತ್ಯ ಮೂಲಸೌಲಭ್ಯ ಒದಗಿಸಲು ಮುಂದಾಗಬೇಕಿದೆ. ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರ ಪಟ್ಟಿ ದೊರೆಯಲಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸಭೆಗಳಿಗೆ ತೆರಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದ ನಿವೇಶನ ರಹಿತರ ಪಟ್ಟಿ ಪಡೆಯುವಂತೆ ಸಲಹೆ ಮಾಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಳನಿ ಪ್ರಕಾಶ ಮತ್ತು ಮುತ್ತಪ್ಪ ಮಾತನಾಡಿ ವೀರಾಜಪೇಟೆ ತಾಲೂಕಿನ ತಟ್ಟೆಕೆರೆ ಗಿರಿಜನ ಹಾಡಿಯಲ್ಲಿ ಸುಮಾರು 45 ಕುಟುಂಬಗಳು ಬಹಳ ಹಿಂದಿನಿಂದಲೂ ವಾಸ ಮಾಡುತ್ತಿವೆ. ಆದರೆ ಈ ಪ್ರದೇಶವು ಶೀತದಿಂದ ಕೂಡಿದ್ದು, ವಾಸ ಮಾಡಲು ಸೂಕ್ತ ನಿವೇಶನ ಕೊಡಿಸಬೇಕಿದೆ ಎಂದು ಮನವಿ ಮಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ಕಾಲೋನಿ ಹಾಗೂ ಹಾಡಿಗಳಿಗೆ ತೆರಳಲು ಯೋಗ್ಯ ರಸ್ತೆಗಳು ಇಲ್ಲ, ರಸ್ತೆ ನಿರ್ಮಾಣ ಮಾಡಬೇಕು. ಹತ್ತಿರದಲ್ಲಿ ಶಾಲೆ-ಅಂಗನವಾಡಿಗಳನ್ನು ತೆರೆಯಬೇಕು ಎಂದು ಪಳನಿ ಪ್ರಕಾಶ ಮತ್ತು ಮುತ್ತಪ್ಪ ಕೋರಿದರು.

ವೀರಾಜಪೇಟೆ ಸ್ಥಳೀಯ ಸಂಸ್ಥೆಯಲ್ಲಿ ದಿನಗೂಲಿ ಪೌರಕಾರ್ಮಿಕರಿಗೆ ಸಂಬಳ ದೊರೆತ್ತಿಲ್ಲ, ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದ್ದು, ಇದುವರೆಗೆ ಯಾವದೇ ಕ್ರಮ ಆಗಿಲ್ಲ ಎಂದು ಪಳನಿ ಪ್ರಕಾಶ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ನ್ಯಾಯಾಲಯದಲ್ಲಿ ನಿರ್ಧಾರವಾದ ನಂತರ ತೀರ್ಮಾನ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಜೆ.ಪಿ.ರಾಜು ಅವರು ಮಾತನಾಡಿ ವೀರಾಜಪೇಟೆ ತಾಲೂಕಿನ ಕಾನೂರು ಗ್ರಾ.ಪಂ.ವ್ಯಾಪ್ತಿಯ ಗೋಣಿಗದ್ದೆಯಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ಹಾಡಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಮಿತಿ ಸದಸ್ಯ ನವೀನ್ ದೇರಳ, ಸುಕುಮಾರ್, ಜಾಯ್ಸ್ ಮೇನೆಜಸ್ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್, ಜಿ.ಪಂ.ಉಪ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವಿನಯಕುಮಾರ್, ತಹಶೀಲ್ದಾರ್ ಶಾರದಾಂಭ, ಬಾಡ್ಕರ್, ತಾ.ಪಂ.ಇಒಗಳಾದ ಚೆಟ್ಟಿಯಪ್ಪ, ಜೀವನ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು.