ಚೆಟ್ಟಳ್ಳಿ, ಜೂ. 22: ದುಬಾರೆ ಆನೆ ಶಿಬಿರದೊಳಗೊಂದು ಪುಟ್ಟ ಸರಕಾರಿ ಶಾಲೆ. ಒಂದರಿಂದ ಐದನೇ ತರಗತಿಗೆ ಇಲ್ಲಿ ಇಬ್ಬರೇ ಶಿಕ್ಷಕರಾದರೆ ಶಾಲೆಗೆ ಸರಿಯಾಗಿ ಹಾಜರಾಗದ ಹಾಡಿಯ ಜೇನು ಕುರುಬ ಜನಾಂಗದ ಮಕ್ಕಳಿಗೆ ಬಿಸಿಯೂಟ, ಹಾಲು, ಬಟ್ಟೆ ಬರೆ, ಪುಸ್ತಕಗಳೆಲ್ಲ ನೀಡಿ ಉಚಿತ ಕಲಿಕೆ ನೀಡಿದರೂ, ಇದು ಮಕ್ಕಳಿಗೇ ಬೇಡವಾದ ಶಾಲೆಯ ಗೋಳಿನ ಕಥೆ...!!

ದುಬಾರೆ ಆನೆ ಶಿಬಿರದ ಮೂಲೆಯಲ್ಲಿ ಮೂರು ಕೊಠಡಿಯ ಸರಕಾರಿ ಪ್ರಾಥಮಿಕ ಶಾಲೆ. ಒಂದನೇ ತರಗತಿಯಲ್ಲಿ 5, ಎರಡರಲ್ಲಿ 7, ಮೂರರಲ್ಲಿ 6 ನಾಲ್ಕರಲ್ಲಿ 4 ಹಾಗೂ ಐದನೇ ತರಗತಿಯಲ್ಲಿ 5 ಮಕ್ಕಳಿದ್ದು, ಒಟ್ಟು 27 ಮಕ್ಕಳಿರುವರು. 1 ರಿಂದ 3 ಒಂದೇ ತರಗತಿಯಲ್ಲಿ ಪಾಠವಾದರೆ 4 ಮತ್ತು 5 ವiಕ್ಕಳಿಗೆಲ್ಲ ಮತ್ತೊಂದು ತರಗತಿಯಲ್ಲಿ ಎರಡು ಶಿಕ್ಷಕರು ಪಾಠ ಮಾಡುತ್ತಿರುವ ಪರಿಸ್ಥಿತಿಯಾಗಿದೆ.

ಹಾಡಿಯ ಮಕ್ಕಳೇ ಶಾಲೆಗೆÉ ಬರದೆ ಹಿಂದೇಟು

ದುಬಾರೆ ಹಾಡಿಯ ಜೇನು ಕುರುಬ ಜನಾಂಗದ ಮಾವುತರ, ಕಾವಾಡಿಗಳ ಹಾಗೂ ಸಿಬ್ಬಂದಿಗಳ ಮಕ್ಕಳೆಲ್ಲ ಹುಟ್ಟಿನಿಂದ ದುಬಾರೆಯ ಕಾಡಿನಲ್ಲಿ, ಹೊಳೆಯ ನೀರಿನಲ್ಲೆ ಆಟವಾಡಿ, ಆನೆಯೊಂದಿಗೆ ಒಟನಾಡ ಇಟ್ಟುಕೊಳ್ಳುತ್ತಾ, ಮಳೆಗಾಳಿ - ಬಿಸಿಲು ಎನ್ನದೆ ಹಾಡಿಯೊಳಗೆ ಸುತ್ತಾಡಿ ಕೊಂಡಿರುವ ಮಕ್ಕಳನ್ನು ನಾಲ್ಕು ಗೋಡೆಯ ಶಾಲೆಯೊಳಗೆ ತಂದು ಪಾಠ ಮಾಡಿ ಅಕ್ಷರ ಕಲಿಸುತ್ತೇವೆನ್ನುವ ಶಿಕ್ಷಕರ ಶ್ರಮಕ್ಕೆ ಇಲ್ಲಿ ಬೆಲೆ ಇಲ್ಲವೇ ಇಲ್ಲ. ಶಾಲೆಗಳಿಗೆ ಮಕ್ಕಳು ಬರದೆ ಅಡಗುತ್ತಾ ಆನೆ ಶಿಬಿರದೊಳಗೆ ಆಟವಾಡುತ್ತಿರುವದು ಕಂಡು ಬರುತ್ತಿದೆ.

ಮಕ್ಕಳನ್ನು ಮನೆಯಿಂದ ಎಳೆದು ತಂದ ಶಿಕ್ಷಕಿಯರು

ಬಾ... ಮರಳಿ ಶಾಲೆಗೆ ಎಂಬ ಶಿಕ್ಷಣ ಇಲಾಖೆಯ ಕಾನೂನಿನಂತೆ ಪ್ರತಿಯೊಬ್ಬ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಾಲೆಗೆ ಬರದ ಮಕ್ಕಳನ್ನು ಹಾಡಿಗಳಿಗೆ ತೆರಳಿ ಮನ ಒಲಿಸಿದರೆ ಮತ್ತೆ ಕೆಲವರನ್ನು ಕೈ ಹಿಡಿದು ಕರೆತಂದು ಭಾಷೆ ಕಲಿಸಿ, ಬರೆಯಲು ಕಲಿಸಿ ಪಾಠ ಹೇಳಿದರೆ... ಶಿಕ್ಷಕರು ಬೈಯುತ್ತಾರೆ, ಹೊಡೆಯುತ್ತಾ ರೆಂಬ ಸಬೂಬು ಹೇಳಿ ಮನೆಯಲ್ಲೇ ಅಡಗಿಕೊಳ್ಳುತ್ತಾರೆ.

ಒತ್ತಾಯಿಸಿದರೆ ನಮ್ಮ ಮಕ್ಕ... ಓದಿ ಏನಾಗ್‍ಬೇಕ್? ಶಾಲೆಗೆ ಬರದಿಲ್ಲೆ... ಎಂದು ಅವಿದ್ಯಾವಂತ ಪೋಷಕರಿಂದ ತಿರುಗಿ ಹೇಳಿಸಿ ಕೊಳ್ಳುವಂತಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ.

ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ್ ಕಾರ್ಡಿಲ್ಲ. ಬ್ಯಾಂಕ್ ಖಾತೆಯಿಲ್ಲ, ಫೋಟೋ ನೀಡಲ್ಲ... ಸಮವಸ್ತ್ರ ಬಟ್ಟೆ ನೀಡಿದರೆ ಹೊಲಿಸಿಕೊಳ್ಳೋದು ಇಲ್ಲ. ಮಕ್ಕಳಿಗೆ ದಾಖಲಿಸಲು ಆಧಾರ್ ಕಾರ್ಡ್ ಕಡ್ಡಾಯವಾದ್ದರಿಂದ ವiಕ್ಕಳು ದಾಖಲಾತಿಯಾದ ಕೂಡಲೇ ಮುಖ್ಯ ಶಿಕ್ಷಕಿಯೇ ತನ್ನ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ.

ಶಾಲಾ ಕಟ್ಟಡದ ಸುತ್ತಲೂ ಕಾಂಪೌಂಡಿಲ್ಲ

ಹತ್ತು ಹಲವು ವರ್ಷಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ತಟ್ಟಿ ಹಾಗೂ ಜೋಪುಡಿಯಲ್ಲಿ ಪ್ರಾರಂಭವಾದ ಸರಕಾರಿ ಶಾಲೆಗೆ ಸರಕಾರದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಆದರೆ ಶಾಲೆಯ ಭದ್ರತೆಯ ದೃಷ್ಟಿಯಿಂದ ಸುತ್ತಲೂ ಕಾಂಪೌಂಡು ನಿರ್ಮಿಸಬೇಕಿದ್ದರೂ, ಈವರೆಗೂ ನಿರ್ಮಾಣವಾಗಿಲ್ಲ.

ನಿತ್ಯವೂ ದನಕರುಗಳು ಶಾಲೆಯ ಮುಂಬಾಗಿಲ ಬಳಿ ಮಲಗಿ ಸೆಗಣಿ ಹಾಕಿದ್ದನ್ನು ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ನಿತ್ಯವೂ ಶುಚಿಗೊಳಿಸಿ ಶಾಲೆಯನ್ನು ಸ್ವಚ್ಛತೆಯಿಂದ ಕಾಪಾಡುವ ಪರಿಸ್ಥಿತಿಯಾಗಿದೆ.

ಪರಿಸರ ದಿನ ನೆಟ್ಟ ಗಿಡವೆಲ್ಲ ಆನೆ ಪಾಲು

ಕಳೆದ ವಾರಗಳ ಹಿಂದೆಯಷ್ಟೆ ಪರಿಸರ ದಿನದಂದು ಮಕ್ಕಳು ಹಾಗೂ ಶಿಕ್ಷಕರು ಶಾಲೆಯ ಮುಂದೆ ಹಲವು ಗಿಡಗಳನ್ನೆಲ್ಲ ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಿದರು. ಆದರೆ ಆನೆಗಳು ನಿತ್ಯವೂ ಓಡಾಡುವ ಜಾಗವಾದ್ದರಿಂದ ಎಳೆದು ತಿಂದು ನಾಶಪಡಿಸಿದೆ.

ಶಾಲೆಯ ನಿರ್ವಹಣೆಯಲ್ಲೇ ಶಾಲಾ ಶಿಕ್ಷಕಿಯರು

ಮಕ್ಕಳಿಗೆ ಪಾಠ ಮಾಡಲು ನಿತ್ಯವೂ ದುಬಾರೆ ಆನೆ ಶಿಬಿರಕ್ಕೆ ಬೋಟಿನಲ್ಲೇ ಬಂದು ಹೋಗುವ ಪರಿಸ್ಥಿತಿಯಾಗಿದೆ. ಶಾಲೆಗಳಿಗೆ ಬೇಕಾದ ಸಾಮಗ್ರಿ, ಗ್ಯಾಸ್‍ನೆಲ್ಲ ದುಬಾರೆಯಿಂದ ಬೋಟಿನಲ್ಲಿ ತಂದು ಶಾಲೆಗಳಿಗೆ ಹೊತ್ತು ತರುವ ಪರಿಸ್ಥಿತಿಯಾದರೆ ಪಕ್ಕದ ಶಾಲೆಗಳಲ್ಲಿ ಇಟ್ಟಂತ ತಿಂಗಳ ರೇಷನ್ನನ್ನು ದುಪ್ಪಟ್ಟು ಬಾಡಿಗೆ ನೀಡಿ ತರುವ ಪರಿಸ್ಥಿತಿಯಾಗಿದೆ.

ಮಳೆಗಾಲದಲ್ಲಿ ದುಬಾರೆ ಹೊಳೆಯು ಹೆಚ್ಚಾಗಿ ತುಂಬಿ ಬೋಟ್‍ಗಳು ಚಲಿಸಲಾಗದೆ ಶಿಕ್ಷಕಿಯರಿಗೆ ಶಾಲೆಗಳಿಗೆ ಬರಲು ಸಾಧ್ಯವಾಗದಿದ್ದರೆ, ಅಂದು ಮಕ್ಕಳಿಗೆಲ್ಲ ರಜೆ. ಒಬ್ಬ ಪುರುಷ ಶಿಕ್ಷಕನು ಇಲ್ಲದೇ ಇಂತ ಕಷ್ಟಕರ ಜಾಗದಲ್ಲಿ ಶಿಕ್ಷಕಿಯರೇ ಎಲ್ಲ ಕೆಲಸವನ್ನು ನಿರ್ವಹಿಸ ಬೇಕಿರುವದು ಶಿಕ್ಷಣಾಧಿಕಾರಿಗೆ ಕಾಣದಾಗಿದೆಯೇ? 20 ವರ್ಷಗಳ ಸೇವೆಯಲ್ಲಿ 12 ವರ್ಷಗಳಿಂದ ಇದೇ ಶಾಲೆಯಲ್ಲಿ ವೃತ್ತಿ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿಯೊಬ್ಬರು ಎಂತ ಕಷ್ಟಕರ ಪರಿಸ್ಥಿತಿಯಲ್ಲೂ ಉತ್ತಮ ಕಾರ್ಯನಿರ್ವಹಣೆಯನ್ನು ಮಾಡುತ್ತಿದ್ದಾರೆ.

ಇನ್ನಾದರೂ ಜೇಷ್ಠತೆಯ ಆಧಾರದ ಮೇಲೆ ವರ್ಗಾವಣೆಯ ಮೂಲಕ ಅನುಕೂಲತೆಯನ್ನು ಮಾಡಿಕೊಡಬೇಕಾಗಿರುವದು ಶಿಕ್ಷಣಾಧಿಕಾರಿಗಳ ಮೊದಲ ಕರ್ತವ್ಯವಾಗಿದೆ.

- ಪುತ್ತರಿರ ಕರುಣ್ ಕಾಳಯ್ಯ,

ಪಪ್ಪು ತಿಮ್ಮಯ್ಯ