ಸುಂಟಿಕೊಪ್ಪ, ಜೂ. 23: ಪಕೃತಿಯ ಹಚ್ಚ ಹಸಿರಾಗಿ ಹೊದ್ದು ಮಲಗಿರುವ ಕಾನನದ ನಡುವೆ ಜರಿ-ತೊರೆಗಳನ್ನು ದಾಟಿ ನಯನ ಮನೋಹರವಾಗಿ 50 ಅಡಿ ಎತ್ತರದಿಂದ ದುಮ್ಮಿಕುವ ಜಲಧಾರೆ ಎಂಥಹ ಪಕೃತಿ ಪ್ರೇಮಿಗಳ ಮನಸ್ಸನ್ನು ಸೂಜಿಕಲ್ಲಿನಂತೆ ಆಕರ್ಷಿಸುತ್ತಿದೆ. ಆದರೆ ಈ ಜಲಧಾರೆ ಇಲ್ಲಿರುವದು ಪ್ರವಾಸೋದ್ಯಮ ಇಲಾಖೆಗೆ ಆಗಲಿ, ಅಸುಪಾಸಿನ ಅನೇಕರಿಗೆ ತಿಳಿದಿಲ್ಲ.
ಸುಂಟಿಕೊಪ್ಪ-ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯಿಂದ ಕೆದಕಲ್ ಗ್ರಾಮದಿಂದ ಬಲಗಡೆಗೆ ಹಾಲೇರಿಗೆ ತೆರಳುವ ಹಾದಿಯಲ್ಲಿ 1 ಕಿ.ಮೀ. ದೂರದ ಧುಮ್ಮಿಕ್ಕುವ ಕಾನನದ ನಡುವೆ ಇರುವ ಈ ಜಲಧಾರೆ ಮೊದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ಕಾಣಸಿಗುತ್ತದೆ. ಅಂದಾಜು 50 ಅಡಿ ಎತ್ತರದಿಂದ ಧುಮುಕುವ ನೀರು ನೋಡಲು ಆತ್ಯಾಕರ್ಷಕವಾಗಿದೆ. ಮಡಿಕೇರಿ ಸಮೀಪದ ಅಬ್ಬಿಫಾಲ್ಸ್‍ಗಿಂತ ಏನೂ ಕಡಿಮೆ ಇರದ ಈ ಜಲಧಾರೆ ಪ್ರಚಾರದ ಕೊರತೆಯಿಂದ ಪ್ರವಾಸಿಗರ ಗಮನಕ್ಕೆ ಬಂದಿಲ್ಲ. ಮಾಮೂಲಿಯಾಗಿ ಕೆದಕಲ್-ಕಾಂಡಾನಕೊಲ್ಲಿ ರಸ್ತೆಗೆ ಹಾದು ಹೋಗುವ ರಸ್ತೆ ಬದಿಯಲ್ಲಿರುವ ಸಣ್ಣದಾದ ಜಲಧಾರೆಯು ಮಾತ್ರ ಹಾಲೇರಿಯಲ್ಲಿ ಇದೆ ಎಂದು ಅಸುಪಾಸಿನ ಜನರು ತಿಳಿದು ಕೊಂಡಿದ್ದಾರೆ. ಈ ಜಲಧಾರೆಯಿಂದ ಅನತಿ ದೂರದಲ್ಲೇ ಮತ್ತೊಂದು ಜಲಧಾರೆ ತೋಟದ ಮಧ್ಯೆ ತೆರಳಿದಾಗ ಜನ-ಮನ ಸೂರೆಗೊಳ್ಳುತ್ತದೆ. ಒಟ್ಟಾರೆ ಕೆದಕಲ್ ಗ್ರಾಮ ಪಂಚಾಯಿತಿಯಿಂದ ಹಾಲೇರಿಗೆ ತೆರಳುವ ದುರ್ಗಮ ಹಾದಿಯಲ್ಲಿ 3 ಜಲಾಧಾರೆಗಳು ಬೊರ್ಗರೆಯುತ್ತಾ ಬೆಳ್ಳಿ ನೊರೆಯಂತೆ ಹರಿದು ಬರುತ್ತಿದೆ.
ಗ್ರಾಮ ಪಂಚಾಯಿತಿಯವರು ಆಸಕ್ತಿವಹಿಸಿ ಪ್ರವಾಸೋದ್ಯಮ ಇಲಾಖೆಯ ಗಮನ ಸಳೆದು ಈ ಜಲಾಶಯಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಅತ್ಯುತ್ತಮವಾಗಿ ಹರಿದು ಜನಮಾನಸದಲ್ಲಿ ಉಳಿಯುವ ಈ ಜಲಧಾರೆ ಅಭಿವೃದ್ಧಿಪಡಿಸಿದರೆ ಗ್ರಾಮ ಪಂಚಾಯಿತಿಗೂ ಒಂದಿಷ್ಟು ವರಮಾನವನ್ನು ಅಬ್ಬಿಫಾಲ್ಸ್, ರಾಜಾಸೀಟಿನಲ್ಲಿ ಪ್ರವಾಸಿಗರಿಗೆ ನಿಗದಿಪಡಿಸಿ ಶುಲ್ಕದಂತೆ ಲಭಿಸಲಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯವರು ಕಾರ್ಯೋನ್ಮುಖರಾಗುವಂತಾಗಲಿ.
ಕೊಡಗಿನಲ್ಲಿ ಮಳೆಗಾಲದಲ್ಲಿ ನದಿಹಳ್ಳ ತೊರೆಗಳು ತುಂಬಿ ಹರಿಯುತ್ತವೆ. ಸ್ವಿಜ್ಜರ್ ಲ್ಯಾಂಡ್ ಎಂದೇ ಹೆಸರಾದ ಕೊಡಗಿನ ಪಕೃತಿ ಸೌಂದರ್ಯ ಬೆಟ್ಟ ಗುಡ್ಡ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ಜಲಪಾತಗಳ ನಯನ ಮನೋಹರ ದೃಶ್ಯವನ್ನು ನೋಡಲು ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆಗೆ ಮೈಯೊಡ್ಡಲು ಪ್ರವಾಸಿಗರು ಮೈಚಳಿಬಿಟ್ಟು ಹಾತೊರೆಯುತ್ತಾರೆ.
ಸುಂಟಿಕೊಪ್ಪ ಸಮೀಪದ ಕೆದಕಲ್‍ನಿಂದ 4 ಕಿ.ಮೀ. ದೂರಕ್ಕೆ ಕಾಫಿ ತೋಟ ಕಾಡುಗಳನ್ನು ಸುತ್ತಿ ಬಳಸಿ ತೆರಳಿದರೆ ‘ಡಿಬ್ಲಾಕ್’ ಫಾಲ್ಸ್‍ನಿಂದ ಕೊಡಗಿನ ಅಬ್ಬಿಪಾಲ್ಸ್, ಇರ್ಪು, ಮಲ್ಲಳ್ಳಿ, ಚೇಲಾವರ, ಕೋಟೆ ಅಬ್ಬಿಫಾಲ್ಸ್‍ಗೂ ಸವಾಲು ಒಡ್ಡುವ ರೀತಿ ಗಿರಿಕಂದರಗಳ ಬೆಟ್ಟದಿಂದ ಅಂದಾಜು 25 ಅಡಿ ಎತ್ತರದಿಂದ ಹರಿದು ಬರುವ ಸುಂದರ ದೃಶ್ಯ ಕಾಣಬಹುದಾಗಿದೆ.
ಪ್ರಚಾರದ ಕೊರತೆ ಹಾಗೂ ಗ್ರಾಮಸ್ಥರ ನಿರಾಸಕ್ತಿ ಕಾರಣವೋ ಎಂಬಂತೆ ಈ ಜಲಪಾತ ಇದುವರೆಗೆ ಜನತೆಯ ಪರಿಚಯಕ್ಕೆ ಬರಲಿಲ್ಲ.