ಸೋಮವಾರಪೇಟೆ, ಜೂ.22: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಜೆಗುಂಡಿ ಗ್ರಾಮದಲ್ಲಿ ಹಲವಷ್ಟು ಮನೆಗಳು, ತಡೆಗೋಡೆ ಕುಸಿದು ಹಾನಿಗೀಡಾಗಿರುವ ಬಗ್ಗೆ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸದಸ್ಯರಾದ ಕೆ.ಎ. ಯಾಕೂಬ್, ಕವಿತಾ ಅವರುಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದ ಹಿನ್ನೆಲೆ, ಇಂದು ಮಧ್ಯಾಹ್ನ ಬಜೆಗುಂಡಿಗೆ ಭೇಟಿ ನೀಡಿ ವಾಸ್ತವಾಂಶ ಅರಿತರು.ಗ್ರಾಮದ ರಾಗಿಣಿ ಸುಬ್ರಮಣಿ ಅವರ ಮನೆ ನೆಲಸಮಗೊಂಡು ಕುಟುಂಬ ಬೀದಿಗೆ ಬಂದಿರುವ ಬಗ್ಗೆ ಖುದ್ದು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಈ ಬಗ್ಗೆ ವರದಿ ನೀಡಲಾಗಿದೆಯೇ? ಎಂದು ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಪ್ರಶ್ನಿಸಿದರು.

ಇದರೊಂದಿಗೆ ಸುರೇಶ್ ಅವರ ಮನೆಯ ಮೇಲ್ಭಾಗದಲ್ಲಿರುವ ತೋಟದಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಗಾಳಿ ಮಳೆಗೆ ಮನೆಯ ಮೇಲೆ ಬಿದ್ದರೆ ಭಾರೀ ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಸಂದರ್ಭ, ತಕ್ಷಣ ಕಂದಾಯ ಇಲಾಖೆಯಿಂದ ಸಂಬಂಧಿಸಿದ ತೋಟ ಮಾಲೀಕರಿಗೆ ನೋಟೀಸ್ ನೀಡಿ, ಮರಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಸಹಾಯಕ ಮೋಹನ್ ಅವರಿಗೆ ಸೂಚಿಸಿದರು.

ಸುರೇಶ್ ಅವರ ಮನೆಯ ಹಿಂಭಾಗ ಕುಸಿಯುವ ಹಂತದಲ್ಲಿರುವ ತಡೆಗೋಡೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಇದರೊಂದಿಗೆ ಮನೆ ಹಾನಿಗೊಂಡಿರುವ ಶೋಭಾ ರಾಜು, ಬರೆಕುಸಿದು ನಷ್ಟ ಸಂಭವಿಸಿರುವ ನವೀನ, ತಡೆಗೋಡೆ ಕುಸಿಯುವ ಭೀತಿಯಲ್ಲಿರುವ ರಾಜು ತಂಗಮಣಿ, ಸಗಾಯ್‍ರಾಜು, ಚಂದ್ರ ಅವರ ಮನೆಗಳಿಗೆ ಭೇಟಿ

(ಮೊದಲ ಪುಟದಿಂದ) ನೀಡಿ ಪರಿಶೀಲಿಸಿದರು. ಬಜೆಗುಂಡಿ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸದಸ್ಯರಾದ ಕೆ.ಎ.ಯಾಕೂಬ್, ಕವಿತ ಅವರುಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಉದ್ಯೋಗ ಖಾತ್ರಿ ಯೋಜನೆಯಡಿ ತಡೆಗೋಡೆ ನಿರ್ಮಿಸಲು ಮುಂದಾದರೆ ಟಾರ್ಗೆಟ್ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ ಎಂದು ಅಳಲುತೋಡಿಕೊಂಡರು.

ಇದೀಗ ಸಂಭವಿಸಿರುವ ಹಾನಿಗಳ ಬಗ್ಗೆ ಖುದ್ದು ಪರಿಶೀಲಿಸಿದ್ದು, ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗುವದು. ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವದು. ಮಳೆಹಾನಿ ಪರಿಹಾರ ನಿಧಿಯಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹೇಳಿದರು.

ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚನ್ನಕೇಶವ, ಗ್ರಾಮ ಸಹಾಯಕ ಪ್ರಹ್ಲಾದ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.