ಸಿದ್ದಾಪುರ, ಜೂ. 23: ಹುಲಿ ಧಾಳಿಗೆ ಜಾನುವಾರು ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ತಟ್ಟಳ್ಳಿಯಲ್ಲಿ ನಡೆದಿದೆ.

ಮಾಲ್ದಾರೆಯ ತಟ್ಟಳ್ಳಿ ನಿವಾಸಿ ಸೂದನ ಪ್ರದೀಪ್ ಎಂಬವರಿಗೆ ಸೇರಿದ ಜಾನುವಾರನ್ನು ಮೇಯಲು ಬಿಟ್ಟಿದ್ದ ವೇಳೆ ಹುಲಿಯು ಧಾಳಿ ನಡೆಸಿ ಕೊಂದು, ಅರ್ಧ ಭಾಗದಷ್ಟು ದೇಹವನ್ನು ತಿಂದಿದೆ. ಮಾಲ್ದಾರೆಯ ಜೋಸ್‍ಕುರಿಯನ್ ಎಂಬವರ ಕಾಫಿ ತೋಟದಲ್ಲಿ ಜಾನುವಾರುವಿನ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂದನ ಪ್ರದೀಪ್ ಅವರಿಗೆ ಸೇರಿದ ಮತ್ತೊಂದು ಜಾನುವಾರನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಹುಲಿ ಧಾಳಿ ನಡೆಸಿ ಕೊಂದು ಹಾಕಿತ್ತು. ಇದೀಗ ಎರಡನೇಯ ಜಾನುವಾರು ಕೂಡ ಹುಲಿರಾಯನ ಧಾಳಿಗೆ ಬಲಿಯಾಗಿದೆ.

ಈ ಹಿಂದೆಯೂ ಕೂಡ ಇದೇ ಕಾಫಿ ತೋಟದಲ್ಲಿ ಹುಲಿಯ ಧಾಳಿಗೆ ಹಸು ಸಾವನ್ನಪ್ಪಿದ್ದು, ಜನವಸತಿ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷಗೊಳ್ಳುತ್ತಿರುವದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಶಾಲೆಗಳಿಗೆ ತೆರಳಲು ಮಕ್ಕಳು ಕೂಡ ಆತಂಕಕ್ಕೊಳಗಾಗಿದ್ದಾರೆ. ಹುಲಿಯ ಚಲನವಲನ ಅರಿಯಲು ಸ್ಥಳದಲ್ಲಿ ಎರಡು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿರುವದಾಗಿ ಸಿಸಿಎಫ್ ಶಿವಶಂಕರ್ ತಿಳಿಸಿದ್ದಾರೆ. ಮಾತ್ರವಲ್ಲದೇ ಹುಲಿಯ ಸೆರೆಗೆ ಬೋನು ಅಳವಡಿಸಲಾಗುವದು ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಅರಣ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಬರುವಂತೆ ತಿಳಿಸಿದ ಮೇರೆಗೆ ತಿತಿಮತಿ ಎ.ಸಿ.ಎಫ್. ಶಿವಶಂಕರ್ ಹಾಗೂ ಆರ್.ಎಫ್.ಓ. ಅಶೋಕ್ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ಸಂಕೇತ್ ಪೂವಯ್ಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಉಪ ವಲಯ ಅಧಿಕಾರಿ ಶ್ರೀನಿವಾಸ್, ಸಿಬ್ಬಂದಿಗಳಾದ ರಾಮಕೃಷ್ಣ, ಶಂಕರ ಹಾಗೂ ಆರ್.ಆರ್.ಟಿ. ತಂಡ ಹಾಜರಿದ್ದರು.

ಬಳಿಕ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ 35ಕ್ಕೂ ಅಧಿಕ ಜಾನುವಾರುಗಳ ಮೇಲೆ ಹುಲಿ ಧಾಳಿ ನಡೆಸಿದ ಪರಿಣಾಮ ಜಾನುವಾರುಗಳು ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ ನೀಡಿ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ಒತ್ತಾಯಿಸಿದರು. ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ಕೊಡಗಿನ ಬೀರುಗ, ವೆಸ್ಟ್‍ನೆಮ್ಮಲೆ, ಕೊಟ್ಟಗೇರಿ, ಬಾಳೆಲೆ ವ್ಯಾಪ್ತಿ ಸೇರಿದಂತೆ ವಿವಿಧೆಡೆಗಳಲ್ಲಿ 94 ಕ್ಕೂ ಹೆಚ್ಚು ಜಾನುವಾರುಗಳು ಹುಲಿ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದರೂ ಕೂಡ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಖುದ್ದು ಭೇಟಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಆನೆ ತುಳಿತಕ್ಕೊಳಗಾದ ಸಂದರ್ಭ, ಹುಲಿ ಧಾಳಿಯಿಂದ ಜಾನುವಾರುಗಳು ಸಾವನ್ನಪ್ಪಿದ ಸಂದರ್ಭ ಸ್ಥಳಕ್ಕೆ ತೆರಳದೆ ನಿರ್ಲಕ್ಷ್ಯ ವಹಿಸುತ್ತಿರುವ ಹಾಗೂ ಅಸಡ್ಡೆಯಿಂದ ವರ್ತಿಸುತ್ತಿರುವ ಬಗ್ಗೆ ರಾಜ್ಯ ಅರಣ್ಯ ಸಚಿವರಿಗೆ ದೂರು ನೀಡಲಾಗಿದೆ. ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಜಾನುವಾರು ಮಾಲಿಕ ಸೂದನ ಪ್ರದೀಪ್, ಸೇರಿದಂತೆ ಇನ್ನಿತರರು ಇದ್ದರು.

- ಎ.ಎನ್ ವಾಸು