ಶ್ರೀಮಂಗಲ, ಜೂ. 22: ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಬಡರೋಗಿಗಳಿಗೆ ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಸಂಸ್ಥೆಗ ಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದು ಉಚಿತ ಸೇವೆ ನೀಡುತ್ತಿರುವದು ಬಡರೋಗಿಗಳ ಮುಳುಗುತ್ತಿರುವ ಬದುಕಿಗೆ ಆಸರೆಯಾಗಿದೆ.
ಆದರೂ, ಇಂತಹ ಸೇವೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ಉಚಿತ ಸೇವೆಯನ್ನು ನಂಬಿ ಹಾಗೂ ಅನಿವಾರ್ಯತೆಯಿಂದ ಬರುವ ಬಡ ರೋಗಿಗಳಿಗೆ ಇದರಿಂದ ಯಾತನೆಯಾಗುತ್ತಿದೆ. ಇಂತಹ ಸೇವೆ ನೀಡುವ ಸಂದರ್ಭ ಸಕಲ ವ್ಯವಸ್ಥೆಯ ಕೊರತೆಯಿಂದ ಸಮಸ್ಯೆ ಎದುರಾಗುತ್ತಿದೆ.
ವೀರಾಜಪೇಟೆಯಲ್ಲಿರುವ ತಾಲೂಕು ಆರೋಗ್ಯ ಕೇಂದ್ರದಲ್ಲಿ ಬಿಆರ್‍ಎಸ್ ಹೆಲ್ತ್ ಮತ್ತು ರಿಸರ್ಚ್ ಇನ್ಸ್‍ಟಿಟ್ಯೂಟ್‍ನಿಂದ 2 ಡಯಾಲಿಸಿಸ್ ಯಂತ್ರ, ಪೀಠೋಪ ಕರಣವನ್ನು ನೀಡಿದ್ದು, ಇದರ ನಿರ್ವಹಣೆಗೆ ಸಿಬ್ಬಂದಿ, ಅವರ ವೇತನವನ್ನು ಸಹ ಸಂಸ್ಥೆ ನೀಡುತ್ತಿದೆ. ತಾಲೂಕು ಆರೋಗ್ಯ ಕೇಂದ್ರವು ಕೊಠಡಿ, ಡಯಾಲಿಸಿಸ್‍ಗೆ ಬೇಕಾದ ಯಥೇಚ್ಛ ನೀರು, ನಿರಂತರ ವಿದ್ಯುತ್‍ಗಳನ್ನು ನೀಡಬೇಕಾಗಿದೆ.
ಆರೋಗ್ಯ ಕೇಂದ್ರದಲ್ಲಿ ಮುಖ್ಯವಾಗಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಆಗಾಗ್ಗೆ ವಿದ್ಯುತ್ ಕಡಿತವಾಗುವ ಸಂದರ್ಭ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಪ್ರಗತಿಯಲ್ಲಿರುವಾಗಲೇ ವಿದ್ಯುತ್ ಕಡಿತವಾದರೆ ಚಿಕಿತ್ಸೆ ಪೂರ್ಣಗೊಳ್ಳದೆ ರೋಗಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ವಿದ್ಯುತ್ ಕಡಿತವಾದ ತಕ್ಷಣವೇ ಸ್ವಯಂ ಚಾಲಿತ ಜನರೇಟರ್ ಮೂಲಕ ವಿದ್ಯುತ್ ನೀಡಬೇಕಾಗಿದೆ. ಆದರೆ, ವೀರಾಜಪೇಟೆ ಆರೋಗ್ಯ ಕೇಂದ್ರದಲ್ಲಿರುವ ಜನರೇಟರ್ ಸುಮಾರು 40 ವರ್ಷ ಹಳೆಯದು. ಆಗಾಗ ದುರಸ್ತಿ ಉಂಟಾಗುತ್ತಿದೆ. ವಿದ್ಯುತ್ ಕಡಿತವಾದಂತಹ ಸಂದರ್ಭದಲ್ಲಿ ಸ್ವಯಂ ಚಾಲನೆ ಆಗುವದಿಲ್ಲ. ವಿದ್ಯುತ್ ಕಡಿತವಾದ ನಂತರ ದೂರದಲ್ಲಿರುವ ಜನರೇಟರ್ ಕೊಠಡಿಗೆ ತೆರಳಿ ಆಸ್ಪತ್ರೆ ಸಿಬ್ಬಂದಿ ಅದನ್ನು ಕೈಯಿಂದ ಚಾಲನೆಗೊಳಿಸಬೇಕು. ರೋಗಿಗಳ ಅದೃಷ್ಟ ಚೆನ್ನಾಗಿದ್ದರೆ ಜನರೇಟರ್ ಚಾಲುಗೊಳ್ಳುತ್ತದೆ. ಹಲವು ವೇಳೆ ದುರಸ್ತಿಯಿಂದ ಚಾಲನೆ ಆಗದೆ ಕೈಕೊಟ್ಟಿರುವ ಸಂದರ್ಭಗಳು ಬಹಳಷ್ಟಿವೆ. ಇಂತಹ ಸಂದರ್ಭದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪ್ರಗತಿಯಲ್ಲಿರುವ ರೋಗಿಗೆ ಚಿಕಿತ್ಸೆ ಪೂರ್ಣವಾಗದೆ ವಿದ್ಯುತ್ ಬರುವವರೆಗೆ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲವೇ, ಮರು ದಿನ ಮತ್ತೆ ಡಯಾಲಿಸಿಸ್‍ಗೆ ಬರಬೇಕಾಗುತ್ತದಲ್ಲದೆ, ಆ ದಿನದ ಸರತಿ ಸಾಲಿನಲ್ಲಿರುವ ರೋಗಿಗಳು ಸಹ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಮತ್ತೆ ಮರು ದಿನ ಬರಬೇಕಾಗುವದು ಅನಿವಾರ್ಯ. ಇಂತಹ ಸಂದರ್ಭ ದೂರದ, ಗ್ರಾಮೀಣ ಭಾಗದಿಂದ ಬರುವ ರೋಗಿಗಳು ಮರು ದಿನ ಬರಬೇಕಾಗಿರುವದು ದೊಡ್ಡ ಮಟ್ಟದ ಸಮಸ್ಯೆಯೇ ಆಗಿದೆ. ಆದರೆ, ಮರು ದಿನ ಚಿಕಿತ್ಸೆಗಾಗಿ ವೇಳಾಪಟ್ಟಿಯಂತೆ ನಿಗದಿಯಾಗಿರುವ ಇತರ ರೋಗಿಗಳು ಸಹ ಚಿಕಿತ್ಸೆ ಪಡೆಯಲು ಬಂದಿರುವಾಗ ಹೆಚ್ಚಿನ ರೋಗಿಗಳಿಗೆ ಒಂದೇ ದಿನ ಸೀಮಿತ ಯಂತ್ರಗಳಲ್ಲಿ ಚಿಕಿತ್ಸೆ ನೀಡಲು ಹೆಚ್ಚಿನ ಕಾರ್ಯ ಒತ್ತಡ ಹಾಗೂ ಸಮಯದ ಅಭಾವವೂ ಇರುತ್ತದೆ.
ಪ್ರತಿ ರೋಗಿಗಳಿಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ಚಿಕಿತ್ಸೆ ನೀಡಬೇಕಾಗಿರುವದರಿಂದ ಭಾನುವಾರದ ರಜಾ ದಿನ ಹೊರತುಪಡಿಸಿ ವಾರದ ಎಲ್ಲಾ ದಿನಗಳು ಕಾರ್ಯನಿರ್ವಹಿಸಬೇಕಾಗಿದೆ. ಆದ್ದರಿಂದ ಒಂದು ದಿನ ವಿದ್ಯುತ್ ವ್ಯತ್ಯಯವಾದರೂ ಮರು ದಿನ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಆ ದಿನ ನಿಗದಿಯಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವದಿಲ್ಲ. ಇಲ್ಲವೇ ಹೆಚ್ಚುವರಿ ಸಮಯ, ರಾತ್ರಿ ಸಹಿತ ಸೇವೆ ನೀಡಬೇಕಾಗುತ್ತದೆ. ಆದರೆ, ಬಡ ರೋಗಿಗಳು ದೂರದ ಊರು, ಗ್ರಾಮೀಣ ಭಾಗದಿಂದ ಬಸ್ಸು, ಆಟೋಗಳನ್ನು ಅವಲಂಭಿಸಿರುವವರಿಗೆ ಚಿಕಿತ್ಸೆಗೆ ಬರಲು ಹಾಗೂ ತೆರಳಲು ತೀವ್ರ ತೊಂದರೆ ಉಂಟಾಗುತ್ತಿದೆ. ಡಯಾಲಿಸಿಸ್ ರೋಗಿಗಳಿಗೆ ವಾರದ ಎರಡು ದಿನ ಚಿಕಿತ್ಸೆ ನೀಡುವದು ಅನಿವಾರ್ಯ. ಆದ್ದರಿಂದ ಅದನ್ನು ಮುಂದೂಡುವದು ರೋಗಿಗಳ ಜೀವಕ್ಕೆ ಸಂಚಾಕಾರ ತಂದೊಡ್ಡುತ್ತದೆ. ಆದರಿಂದ ಪ್ರತಿ ದಿನ ನಿಗದಿತ ರೋಗಿಗಳಿಗೆ ನಿಗದಿತ ಸಮಯದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವದು ಅನಿವಾರ್ಯವಾಗಿದೆ.
ಅಗತ್ಯತೆಗಳು
*ವಿದ್ಯುತ್ ಕಡಿತದಿಂದ ರೋಗಿಗಳಿಗೆ ನೀಡುವ ಡಯಾಲಿಸಿಸ್ ಚಿಕಿತ್ಸೆಗೆ ತೊಂದರೆಯಾಗದಂತೆ ತಪ್ಪಿಸಲು ಸ್ವಯಂ ಚಾಲಿತ ಜನರೇಟರ್ ವ್ಯವಸ್ಥೆ ಅತ್ಯಗತ್ಯವಾಗಿದೆ.
*ಮಳೆಗಾಲದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ಡಯಾಲಿಸಿಸ್ ಚಿಕಿತ್ಸೆಗೆ ಯಥೇಚ್ಛವಾಗಿ ಬೇಕಾಗಿರುವ ನೀರಿಗೆ ಬೇಸಿಗೆಯಲ್ಲಿ ಸಮಸ್ಯೆ ತಲೆದೋರದಂತೆ ಅದಕ್ಕೆ ವ್ಯವಸ್ಥೆ ಬೇಕು.
*ಡಯಾಲಿಸಿಸ್ ಘಟಕಕ್ಕೆ ಹೊಂದಿಕೊಂಡ ಶೌಚಾಲಯದ ವ್ಯವಸ್ಥೆ ಬೇಕು. ತಾಲೂಕು ಕೇಂದ್ರದಲ್ಲಿ ಘಟಕದ ಹೊರಗೆ ಶೌಚಾಲಯವಿರುವದರಿಂದ, ಆ ಶೌಚಾಲಯವನ್ನು ಡಯಾಲಿಸಿಸ್‍ಯೇತರಾ ರೋಗಿಗಳು ಮತ್ತು ಆಸ್ಪತ್ರೆಗೆ ಬರುವ ಸಾರ್ವಜನಿಕರು ಬಳಸುವದರಿಂದ ಸೋಂಕು ತಗಲುವ ಅಪಾಯ ವಿದ್ದು, ಇದಕ್ಕೆ ಸೂಕ್ತ ಕ್ರಮ ಅಗತ್ಯ.
*ಡಯಾಲಿಸಿಸ್ ಘಟಕದ ಮೂಲಕ ಪ್ಯಾಸೇಜ್‍ನಲ್ಲಿ ಇತರ ರೋಗಿಗಳು ಸಾರ್ವಜನಿಕರು ಪ್ರವೇಶ ನಿಷೇಧಿಬೇಕು. ಸಮೀಪದಲ್ಲಿ ಇತರ ರೋಗಿಗಳಿಗೆ, ಸಾರ್ವಜನಿಕರಿಗೆ ಇರುವ ಶೌಚಾಲಯ ಇರುವದರಿಂದ ಡಯಾಲಿಸಿಸ್ ರೋಗಿಗಳಿಗೆ ಸೋಂಕು ತಗಲುವ ಅಪಾಯ ತಪ್ಪುತ್ತದೆ.
*ಡಯಾಲಿಸಿಸ್ ಘಟಕವಿರುವದರಿಂದ ತಾಲೂಕು ಕೇಂದ್ರಕ್ಕೆ ಯೂರಾಲಜಿ ವೈದ್ಯರ ನೇಮಕ ಮಾಡಬೇಕು.
*ಘಟಕದ ವಾಷಿಂಗ್ ಏರಿಯಾಕ್ಕೆ ಒಳಗಿನಿಂದ ಪ್ರವೇಶದ ಸೌಲಭ್ಯ ಮಾಡಬೇಕು.
*ಸದ್ಯಕ್ಕೆ ಎರಡು ಹಾಸಿಗೆಯ ಡಯಾಲಿಸಿಸ್ ಸೌಲಭ್ಯವಿದ್ದು, ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕನಿಷ್ಟ 5 ಆದರೂ ಬೇಕಾಗುತ್ತದೆ.
*ವಾಷಿಂಗ್ ಕೊಠಡಿ ಸೋರುತ್ತಿದ್ದು, ಛಾವಣಿಯಿಂದ ಸೋರುವ ನೀರಿಗೆ ಬಕೆಟ್ ಇಡಲಾಗಿದೆ. ಮೇಲ್ಚಾವಣಿ ಒಡೆದುಹೋಗಿದ್ದು ದುರಸ್ಥಿಯಾಗಬೇಕಾಗಿದೆ.
ವೀರಾಜಪೇಟೆ ತಾಲೂಕು ಕೇಂದ್ರದ ಸರ್ಜನ್ ಹಾಗೂ ಆಡಳಿತಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಅವರನ್ನು ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
*ಬಿಆರ್‍ಎಸ್ ಸಂಸ್ಥೆಯೂ ತಾಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸುವಾಗ ಎಲ್ಲಾ ಸೌಕರ್ಯವನ್ನು ಖಚಿತಪಡಿಸಿಕೊಂಡು ನಂತರವಷ್ಟೇ ಸ್ಥಾಪಿಸಬೇಕಿತ್ತು.
*ತಾಲೂಕು ಕೇಂದ್ರದಲ್ಲಿ ಲಭ್ಯವಿರುವ ಜನರೇಟರ್‍ನಿಂದ ವಿದ್ಯುತ್ ನಿಡುತ್ತಿದ್ದೇವೆ. ಆದರೆ, ಅದು ತುಂಬಾ ಹಳೆಯದಾಗಿದ್ದು, ಆಗಾಗ ದುರಸ್ತಿಯಾಗುತ್ತಿದ್ದು, ವಿದ್ಯುತ್ ಕಡಿತವಾದರೆ ಸ್ವಯಂ ಚಾಲಿತ ತಂತ್ರಜ್ಞಾನ ಹೊಂದಿಲ್ಲ. ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವು ಸಲ ಪತ್ರ ಬರೆದು 62 ಕೆ.ವಿ ಸಾಮಥ್ರ್ಯದ ಸ್ವಯಂಚಾಲಿತ ಜನರೇಟರ್‍ಗಾಗಿ ಕೋರಲಾಗಿದೆ.
*ಡಯಾಲಿಸಿಸ್ ಘಟಕವು ತಾಲೂಕು ಕೇಂದ್ರದಲ್ಲಿ ಸ್ಥಾಪನೆಯಾಗಿದ್ದರೂ ಈ ಆರೋಗ್ಯ ಕೇಂದ್ರದಲ್ಲಿ ಯೂರಾಲಜಿ ವೈದ್ಯರ ನೇಮಕವಾಗಿಲ್ಲ. ಡಯಾಲಿಸಿಸ್ ಮಾಡುವ ಸಂದರ್ಭ ರೋಗಿಯ ಆರೋಗ್ಯದಲ್ಲಿ ಏರುಪೇರು ಉಂಟಾದರೆ ತುರ್ತಾಗಿ ಚಿಕಿತ್ಸೆ ನೀಡಲು ಪರಿಣತ ಯೂರಾಲಜಿ ವೈದ್ಯರನ್ನು ನೇಮಕ ಮಾಡಬೇಕು.
*ಡಯಾಲಿಸಿಸ್ ಘಟಕದಲ್ಲಿ ಪ್ರತಿ ರೋಗಿಗೆ ಕನಿಷ್ಟ 4 ಗಂಟೆ ಚಿಕಿತ್ಸೆ ನೀಡಬೇಕಾಗಿದೆ. ರೋಗಿಗಳ ಒತ್ತಡದಿಂದ ನಾನೇ ಇದೀಗ ಪ್ರತಿ ದಿನ ಒಂದು ಮಿಷನ್‍ನಿಂದ ತಲಾ ಮೂರು ರೋಗಿಗಳಿಗೆ ಚಿಕಿತ್ಸೆ ನೀಡಲು ಏರ್ಪಾಡುಮಾಡಲಾಗಿದ್ದು, ಕನಿಷ್ಠ 12 ಗಂಟೆ ಅಧಿಕ ಸಮಯ ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಿಸುತ್ತಿದೆ.
*ವಿದ್ಯುತ್ ಕಡಿತದಿಂದ ತೊಂದರೆಯಾಗದಂತೆ ಹಾಗೂ ಡಯಾಲಿಸಿಸ್ ಘಟಕಕ್ಕೆ ನಿರಂತರ ವಿದ್ಯುತ್ ನೀಡಬೇಕಾಗಿರು ವದರಿಂದ ಈಗ ಇರುವ ಜನರೇಟರ್ ಚಾಲನೆಗಾಗಿ ಪ್ರತಿ ತಿಂಗಳು ರೂ. 50 ಸಾವಿರ ಹೆಚ್ಚುವರಿ ಖರ್ಚು ಡೀಸೆಲ್‍ಗಾಗಿ ತಗಲುತ್ತಿದ್ದು, ರೋಗಿಗಳ ಹಿತದೃಷ್ಠಿಯಿಂದ ಆಸ್ಪತ್ರೆ ಆದಾಯದಿಂದ ಬರಿಸಲಾಗುತ್ತಿದ್ದು, ಇದು ಆರೋಗ್ಯ ಕೇಂದ್ರಕ್ಕೆ ಹೊರೆಯಾಗುತ್ತಿದೆ. ಜನರೇಟರ್ ವ್ಯವಸ್ಥೆ ಹಾಗೂ ಯೂರಾಲಜಿ ವೈದ್ಯರು ನೇಮಕವಾದರೆ ಡಯಾಲಿಸಿಸ್ ಘಟಕದ ಬಹುಪಾಲು ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಡಾ. ವಿಶ್ವನಾಥ್ ಸಿಂಪಿ ಹೇಳಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಚಿಕಿತ್ಸೆಯೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಕಮರಿಹೋಗುತ್ತಿರುವ ಬಡ ಜನರ ಬದುಕಿಗೆ ಆಸರೆಯಾಗಿದೆ. ಸರ್ಕಾರದ ಸೇವೆ ಎಲ್ಲಾ ಬಡ ಜನರಿಗೆ ಸಮರ್ಪಕವಾಗಿ ಲಭ್ಯವಾಗಬೇಕಿದೆ. ಅನುಕೂಲವಿರುವವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕು ಆರೋಗ್ಯ ಕೇಂದ್ರದ ಡಯಾಲಿಸಿಸ್ ಘಟಕದಿಂದ ಬಡರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತಾಗಲು ಸ್ವಯಂ ಚಾಲಿತ ಜನರೇಟರ್ ಅಳವಡಿಕೆಗೆ ಶಾಸಕರ ಅನುದಾನದ ಮೂಲಕವಾದರೂ ತಕ್ಷಣ ಸ್ಪಂದಿಸುವಂತಾಗಲಿ ಹಾಗೂ ಯೂರಾಲಜಿ ವೈದ್ಯರ ನೇಮಕ, ನಿರಂತರ ನೀರಿನ ಸೌಲಭ್ಯ ಕಲ್ಪಿಸುವದು ತಮ್ಮ ಜವಾಬ್ದಾರಿ ಎನ್ನುವದನ್ನು ಅರಿತು ಈ ಮೂಲಕ ಬಡ ಜನರಿಗೆ ನೆರವಾಗಲಿ.
- ಅಣ್ಣೀರ ಹರೀಶ್ ಮಾದಪ್ಪ