ಸೋಮವಾರಪೇಟೆ, ಜೂ. 25: ತಾ. 22 ರಂದು ಸಂಜೆ 4 ಗಂಟೆ ಸುಮಾರಿಗೆ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಹೋದ ಯುವಕ ಮನೋಜ್‍ನ ಶವ ನಾಲ್ಕು ದಿನವಾದರೂ ಪತ್ತೆಯಾಗಿಲ್ಲ.

ಇಂದು ಬೆಳಿಗ್ಗೆ 11.30 ಗಂಟೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದ್ದರೂ ಮೃತದೇಹವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಸಫಲತೆ ಕಾಣಲು ಸಾಧ್ಯವಾಗಿಲ್ಲ. ಇದುವರೆಗೂ ಮುಳುಗುತಜ್ಞರಾದ ಕುಮಾರಳ್ಳಿ ಗ್ರಾಮದ ಪ್ರಸನ್ನ, ಹುಣಸೂರಿನ ಫಕೀರಪ್ಪ, ಗರಗಂದೂರಿನ ಲತೀಫ್ ಸೇರಿದಂತೆ ಇತರರು ಜಲಪಾತದ ಬಳಿ ಶೋಧ ಕಾರ್ಯ ನಡೆಸಿದ್ದು, ಇಂದು ಕುಶಾಲನಗರದ ರಾಮಕೃಷ್ಣ ಅವರು ಜಲಪಾತದಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರು.

ಸೋಮವಾರಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಪುಟ್ಟಪ್ಪ ಅವರು ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಸಹಕಾರ ನೀಡಿದ್ದು, ಸಂಜೆಯಾದರೂ ಮೃತದೇಹ ಪತ್ತೆಯಾಗದ ಹಿನ್ನೆಲೆ ಬರಿಗೈಯಲ್ಲಿ ಹಿಂತಿರುಗಿದರು.

ಭೋರ್ಗರೆಯುತ್ತಿರುವ ಜಲಪಾತದಲ್ಲಿ ಶನಿವಾರದಂದು ಮನೋಜ್ ಧರಿಸಿದ್ದ ಜರ್ಕಿನ್ ದೊರಕಿದ್ದನ್ನು ಹೊರತುಪಡಿಸಿದರೆ ಇದುವರೆಗೂ ಯಾವದೇ ಕುರುಹು ಲಭ್ಯವಾಗಿಲ್ಲ. ಈ ಹಿಂದೆ ಇದೇ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದ ಹಲವಾರು ಮೃತದೇಹಗಳನ್ನು ನುರಿತ ಮುಳುಗು ತಜ್ಞ ರಾಮಕೃಷ್ಣ ಅವರು ಹೊರತೆಗೆದಿದ್ದು, ಇಂದು ಅವರೂ ಸಹ ಕಾರ್ಯಾಚರಣೆಯಲ್ಲಿ ಕೂಡಿಕೊಂಡಿದ್ದ ಹಿನ್ನೆಲೆ ಮನೋಜ್‍ನ ಬಗ್ಗೆ ಸುಳಿವು ಲಭಿಸುವ ವಿಶ್ವಾಸ ವ್ಯಕ್ತವಾಗಿತ್ತು.

ಆದರೆ ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಹರಿವು ಅಧಿಕವಾಗಿದ್ದು, ಆಗಾಗ್ಗೆ ವಿದ್ಯುತ್ ಉತ್ಪಾದನಾ ಘಟಕಕ್ಕೆ ನಿರ್ಮಿಸಿರುವ ಡ್ಯಾಂನಿಂದಲೂ ನೀರನ್ನು ಹೊರ ಹರಿಸುತ್ತಿರುವದು ಕಾರ್ಯಾಚರಣೆಗೆ ತೊಡಕಾಗಿದ್ದರೆ, ಇದರೊಂದಿಗೆ ದಟ್ಟ ಮಂಜು ಆವರಿಸುತ್ತಿರುವದು ಹಿನ್ನಡೆಗೆ ಕಾರಣವಾಗಿದೆ. ಜಲಪಾತದ ಕಲ್ಲುಬಂಡೆಗಳಲ್ಲಿ ಪಾಚಿ ಕಟ್ಟಿದ್ದು ಹೆಚ್ಚಿನ ಜಾಗರೂಕತೆಯಿಂದ ನದಿಗೆ ಇಳಿಯಬೇಕಾಗಿದೆ.

ಒಟ್ಟಾರೆ ಕಳೆದ ತಾ. 22ರಂದು ಸಂಜೆ 4 ಗಂಟೆ ಸುಮಾರಿಗೆ ನೀರಿನಲ್ಲಿ ಕಣ್ಮರೆಯಾಗಿರುವ ಮನೋಜ್‍ನ ಬಗ್ಗೆ ನಾಲ್ಕು ದಿನವಾದರೂ ಯಾವದೇ ಮಾಹಿತಿ ಲಭ್ಯವಾಗದೇ ಇರುವದು ಕುಟುಂಬ ಸದಸ್ಯರಲ್ಲಿ ಇನ್ನಿಲ್ಲದ ದುಃಖ ಮೂಡಿಸಿದ್ದರೆ, ಪೊಲೀಸ್ ಇಲಾಖೆಗೂ ನೆಮ್ಮದಿ ಇಲ್ಲದಂತಾಗಿದೆ.