ಸೋಮವಾರಪೇಟೆ, ಜೂ. 25: ಸೋಮವಾರಪೇಟೆ ಪಟ್ಟಣದಲ್ಲಿ ಕಳ್ಳರ ಕೈಚಳಕ ಮತ್ತೆ ಮುಂದುವರೆದಿದೆ. ಕೆಲ ಸಮಯಗಳಿಂದ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ಕಸುಬಿಗೆ ಇಳಿದಿದ್ದು, ನಿನ್ನೆ ರಾತ್ರಿ ದೇವಾಲಯ ಮತ್ತು ಕಾಲೇಜಿಗೆ ತೆರಳಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಇಲ್ಲಿನ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜು ಕಚೇರಿಗೆ ತಡರಾತ್ರಿ 1.40ಕ್ಕೆ ನುಗ್ಗಿದ ಕಳ್ಳನೋರ್ವ, ಕೊಠಡಿ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಹಣಕ್ಕಾಗಿ ಹುಡುಕಾಡಿದ್ದಾನೆ. ಕಚೇರಿಯೊಳಗಿದ್ದ ವಿವಿಧ ದಾಖಲೆ ಪತ್ರಗಳನ್ನು ಎಳೆದಾಡಿ ಸುಮಾರು ಒಂದೂವರೆ ಗಂಟೆಗಳ ಕಾಲ ತಡಕಾಡಿದ್ದಾನೆ.
ಪ್ರಾಂಶುಪಾಲರ ಕೊಠಡಿಯೊಳಗಿದ್ದ 250 ರೂಪಾಯಿ ಚಿಲ್ಲರೆ, 1 ಮೊಬೈಲ್ ತೆಗೆದುಕೊಂಡು ಹೊರಬಂದಿದ್ದಾನೆ. ಇದಕ್ಕೂ ಮುನ್ನ ಕೊಠಡಿಯೊಳಗೆ ಇಯರ್‍ಫೋನ್ ಬಳಸಿಕೊಂಡು ಯಾರೊಂದಿಗೋ ಸಂಭಾಷಣೆ ನಡೆಸಿರುವದು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಟ್ಟಡದೊಳಗೆ ಹೆಜ್ಜೆ ಸದ್ದು ಕೇಳಿ ಬಂದಿದ್ದರಿಂದ ಕಾಲೇಜಿನ ಕೆಳಭಾಗದಲ್ಲಿ ತಂಗಿರುವ ವಾಚ್‍ಮೆನ್ ಹರೀಶ್ ಅವರು ‘ಯಾರದು?’ ಎಂದು ಕೇಳಿದ ಸಂದರ್ಭ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ನಡುರಾತ್ರಿ 1.40ಕ್ಕೆ ಆಗಮಿಸಿದ ಕಳ್ಳ 3.20ರವರೆಗೂ ಕಚೇರಿಯಲ್ಲಿ ಹಣಕ್ಕಾಗಿ ಹುಡುಕಾಡಿರುವದು ಕ್ಯಾಮೆರಾದಲ್ಲಿ ದಾಖಲಾಗಿದೆ.
ಸೋಮೇಶ್ವರ ದೇವಾಲಯದಲ್ಲಿ: ಇದಾದ ನಂತರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಇಲ್ಲಿನ ಸೋಮೇಶ್ವರ ದೇವಾಲಯದ ಹೆಂಚು ತೆಗೆದು ಒಳಗಿಳಿದಿರುವ ಇದೇ ವ್ಯಕ್ತಿ, ಅಲ್ಲಿನ 2 ಸಿ.ಸಿ. ಕ್ಯಾಮೆರಾಕ್ಕೆ ಬಕೆಟ್ ಮುಚ್ಚಿ ತನ್ನ ಕೃತ್ಯವನ್ನು ಮರೆಮಾಚಲು ಯತ್ನಿಸಿದ್ದಾನೆ.
ದೇವಾಲಯದ ಹುಂಡಿಯನ್ನು ನಾಜೂಕಾಗಿ ತೆಗೆದು ಅದರೊಳಗಿದ್ದ ಚಿಲ್ಲರೆ ಹಣವನ್ನು ತೆಗೆದುಕೊಂಡಿದ್ದಾನೆ. ಕಳೆದ ತಾ.21ರಂದು ಹುಂಡಿಯನ್ನು ತೆರೆದು ಅದರೊಳಗಿದ್ದ ಕಾಣಿಕೆ ಹಣವನ್ನು ಆಡಳಿತ ಮಂಡಳಿಯವರು ತೆಗೆದಿಟ್ಟುಕೊಂಡಿದ್ದರಿಂದ ಕಳ್ಳನಿಗೆ ಹೆಚ್ಚಿನ ಹಣ ಲಭ್ಯವಾಗಿಲ್ಲ.
ಇಲ್ಲಿ 20 ನಿಮಿಷಗಳ ಕಾಲವಿದ್ದ ಕಳ್ಳ ನಂತರ ಬಂದ ಮಾರ್ಗದಲ್ಲೇ ಹೊರತೆರಳಿದ್ದಾನೆ. ದೇವಾಲಯದ ಒಳಗೆ ಅಳವಡಿಸಲಾಗಿರುವ 2 ಕ್ಯಾಮೆರಾಗಳಿಗೆ ಬಕೇಟ್ ಮುಚ್ಚಿದ್ದರೂ, ಮತ್ತೊಂದು ಸಿ.ಸಿ. ಕ್ಯಾಮೆರಾ ಕಳ್ಳನ ಕಣ್ಣಿಗೆ ಕಾಣಿಸದೇ ಇದ್ದುದರಿಂದ ಈತನ ಕೃತ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಎಂ. ಶಿವಣ್ಣ ಹಾಗೂ ಸಿಬ್ಬಂದಿಗಳು, ಮಡಿಕೇರಿಯ ಶ್ವಾನದಳ, ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು, ಚಾಲಾಕಿ ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ಶನಿವಾರ ರಾತ್ರಿಯೂ ಸಹ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಸರ, ಕಾಣಿಕೆ ಹುಂಡಿ, ಹುಲಿಬಸವೇಶ್ವರ ದೇವಾಲಯದ ಕಾಣಿಕೆ ಹುಂಡಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಳೆದ ಕೆಲ ಸಮಯದಿಂದ ಸುಮ್ಮನಿದ್ದ ಕಳ್ಳರು ಇತ್ತೀಚೆಗೆ ತಮ್ಮ ಕೈಚಳಕ ಮುಂದುವರೆಸಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ತಕ್ಷಣ ಖದೀಮರನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.